ರೇಣುಕಾಸ್ವಾಮಿ ಕೊಲೆ ಕೇಸ್ ಮಹತ್ವದ ಹಂತಕ್ಕೆ: ದರ್ಶನ್ ವಿರುದ್ಧ ದೋಷಾರೋಪ ನಿಗದಿ : ನವೆಂಬರ್‌ 10ರಂದು ಮುಂದಿನ ವಿಚಾರಣೆ

ರೇಣುಕಾಸ್ವಾಮಿ ಕೊಲೆ ಕೇಸ್ ಮಹತ್ವದ ಹಂತಕ್ಕೆ: ದರ್ಶನ್ ವಿರುದ್ಧ ದೋಷಾರೋಪ ನಿಗದಿ : ನವೆಂಬರ್‌ 10ರಂದು ಮುಂದಿನ ವಿಚಾರಣೆ

ಬೆಂಗಳೂರು: ನಟ ದರ್ಶನ್‌ ಹಾಗೂ ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದೋಷಾರೋಪ ನಿಗದಿಯಾಗಿದ್ದು, ಕ್ರಿಮಿನಲ್ ಕೇಸ್ ಪ್ರಮುಖ ಹಂತವನ್ನು ತಲುಪಿದೆ. ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ಎಲ್ಲ ಆರೋಪಿಗಳ ಎದುರು ಚಾರ್ಜ್‌ಶೀಟ್‌ನಲ್ಲಿರುವ ಆರೋಪಗಳನ್ನು ಓದಿ ಹೇಳಿದರು.

ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ಹಾಜರಾಗಿ “ಸುಳ್ಳು, ಸುಳ್ಳು” ಎಂದು ಪ್ರತಿಕ್ರಿಯಿಸಿ ಆರೋಪಗಳನ್ನು ನಿರಾಕರಿಸಿದರು. ನ್ಯಾಯಾಲಯವು ಬಳಿಕ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಲು ವಿಚಾರಣೆಯನ್ನು ನವೆಂಬರ್‌ 10ಕ್ಕೆ ಮುಂದೂಡಿದೆ.

 ದೋಷಾರೋಪಣೆ ನಿಗದಿಯಾದ ನಂತರ ಇದೀಗ ವಿಶೇಷ ಸಾರ್ವಜನಿಕ ಅಭಿಯೋಜಕರು ಸಾಕ್ಷಿಗಳ ಪಟ್ಟಿ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. ನಂತರ ಕೋರ್ಟ್ ಸಾಕ್ಷ್ಯ ವಿಚಾರಣೆಯ ದಿನಾಂಕ ನಿಗದಿಪಡಿಸಿ, ಪ್ರತ್ಯಕ್ಷ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ದಾಖಲಿಸಲು ಪ್ರಕ್ರಿಯೆ ಆರಂಭವಾಗಲಿದೆ. ಕೊಲೆಗೆ ಬಳಸಿದ ಮರದ ಕೊಂಬೆ, ನೈಲಾನ್ ಹಗ್ಗ, ಲಾಠಿ ಮುಂತಾದ ವಸ್ತುಗಳನ್ನು ಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸಲಿದೆ.

ಸಾಕ್ಷ್ಯ ವಿಚಾರಣೆಯ ನಂತರ ಆರೋಪಿಗಳ ಪರ ವಕೀಲರು ಪಾಟಿ ಸವಾಲು ನಡೆಸಲಿದ್ದು, ಬಳಿಕ ಸಿಆರ್‌ಪಿಸಿ 313 ಅಡಿಯಲ್ಲಿ ಆರೋಪಿಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಲಿದೆ. ಅಗತ್ಯವಿದ್ದರೆ ಆರೋಪಿಗಳ ಪರ ಸಾಕ್ಷಿಗಳನ್ನೂ ಹಾಜರುಪಡಿಸಲು ಅವಕಾಶ ದೊರೆಯಲಿದೆ.

ಕಾನೂನು ತಜ್ಞರ ಪ್ರಕಾರ, ಪ್ರಮುಖ ಸಾಕ್ಷಿಗಳ ಹೇಳಿಕೆಗಳ ವಿಚಾರಣೆ ಪೂರ್ಣಗೊಳ್ಳುವವರೆಗೆ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಅತಿ ಕಡಿಮೆ. ಸಾಕ್ಷ್ಯ ವಿಚಾರಣೆ ಮುಗಿದ ನಂತರ ಮಾತ್ರ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ಸಿಗುವ ಸಾಧ್ಯತೆ ಇದೆ.

ಈ ಪ್ರಕರಣವು ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಕಾರಣವಾಗಬಹುದಾದ ಗಂಭೀರ ಅಪರಾಧವಾಗಿರುವುದರಿಂದ, ದರ್ಶನ್ ಹಾಗೂ ಪವಿತ್ರಾ ಗೌಡರ ಭವಿಷ್ಯವನ್ನು 57ನೇ ಸಿಸಿಹೆಚ್ ಕೋರ್ಟ್ ತೀರ್ಮಾನಿಸಲಿದ್ದು, ಮುಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.

“ಇದು ಕ್ರಿಮಿನಲ್ ಪ್ರಕರಣದ ಒಂದು ಸಾಮಾನ್ಯ ಹಂತ. ಇಂದು ಕೋರ್ಟ್ ಕೇವಲ ದೋಷಾರೋಪಣೆ ಪ್ರಕ್ರಿಯೆ ನಡೆಸಿದೆ. ಇನ್ಮುಂದೆ ಸಾಕ್ಷ್ಯ ವಿಚಾರಣೆ ಪ್ರಾರಂಭವಾಗಲಿದೆ. ಎಲ್ಲ ಆರೋಪಿಗಳು ಆರೋಪಗಳನ್ನು ನಿರಾಕರಿಸಿದ್ದು, ವಿಚಾರಣೆಗೆ ಸಿದ್ಧರಾಗಿದ್ದಾರೆ,” ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.

ಮುಂದಿನ ವಿಚಾರಣೆಯ ದಿನಾಂಕ ನವೆಂಬರ್‌ 10 ಆಗಿದ್ದು, ಅಂದು ನ್ಯಾಯಾಲಯ ಸಾಕ್ಷ್ಯ ವಿಚಾರಣೆಗೆ ಸಂಬಂಧಿಸಿದ ದಿನಾಂಕವನ್ನು ನಿಗದಿಪಡಿಸುವ ನಿರೀಕ್ಷೆ ಇದೆ.