ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿದ್ದ ಸಮಸ್ಯೆಗಳ ನಿವಾರಣೆಗಾಗಿ 712ಕೋಟಿ ರೂ ಬಿಡುಗಡೆ: ಸಂಸದ ಯದುವೀರ್ ಒಡೆಯರ್ ಮಾಹಿತಿ

ಮೈಸೂರು:ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿದ್ದ ಹಲವಾರು ಸಮಸ್ಯೆಗಳ ನಿವಾರಣೆಗಾಗಿ ಕೇಂದ್ರ ಸರ್ಕಾರ ಸುಮಾರು ₹712 ಕೋಟಿ ರೂ ಗಳಷ್ಟು ಹಣವನ್ನು ಬಿಡುಗಡೆ ಮಾಡಿದೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಈ ದಶಪಥ ರಸ್ತೆಯಲ್ಲಿ ಹೊಸತಾಗಿ ಎಂಟ್ರಿ-ಎಕ್ಸಿಟ್, ರೈಲ್ವೇ ಸೇತುವೆ, ಅಂಡರ್ ಪಾಸ್, ಓವರ್ ಪಾಸ್, ಸರ್ವೀಸ್ ರಸ್ತೆ ನಿರ್ಮಾಣದ ಜೊತೆಗೆ ಪ್ರಯಾಣಿಕರಿಗೆ ಅನುಕೂಲಗುವಂತಹ ಅನೇಕ ಸೌಲಭ್ಯಗಳನ್ನು ಒದಗಿಸಲು ಸಹಾಯವಾಗಲಿದ್ದು, ಜೊತೆಗೆ ಪ್ರಮುಖವಾಗಿ ನಮ್ಮ ಮನವಿಗೆ ಸ್ಪಂದಿಸಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಅಂತ್ಯವಾಗುವ ಮೈಸೂರಿನ ಹೊರ ವಲಯದ ಕೆಂಪೇಗೌಡ ವೃತದ ಬಳಿ (ಮಣಿಪಾಲ್ ಆಸ್ಪತ್ರೆ ಜಂಕ್ಷನ್ನಲ್ಲಿ) ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಮೈಸೂರು ಸಿಟಿ ಪ್ರವೇಶಿಸಲು ಸಮಸ್ಯೆಯಾಗುತ್ತಿರುವುದನ್ನು ಪರಿಗಣಿಸಿˌ ಇದಕ್ಕೆ ಪರಿಹಾರವಾಗಿ ಈ ಜಂಕ್ಷನ್ ನಲ್ಲಿ 535 ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಲು ಎನ್.ಎಚ್.ಎ.ಐ ಮುಂದಾಗಿದೆ. ಇದರಿಂದ ಪ್ರಯಾಣಿಕರಿಗೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯ ಕಿರಿಕಿರಿ ದೂರವಾಗಲಿದೆ. ಮೈಸೂರು-ಬೆಂಗಳೂರು ಸಂಪರ್ಕ ಮತ್ತಷ್ಟು ವೇಗ ಹಾಗೂ ಸುಗಮ ಪಡೆದುಕೊಳ್ಳಲು ಈ ಕಾಮಗಾರಿಗೆ ಹಣವನ್ನು ಬಿಡುಗಡೆ ಮಾಡಿರುವ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಹೆದ್ದಾರಿ ಸಚಿವರಾದ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ ಅವರಿಗೆ ಯದುವೀರ್ ಒಡೆಯರ್ ಧನ್ಯವಾದ ಸಲ್ಲಿಸಿದ್ದಾರೆ.