ಮೊಬೈಲ್ ಬಳಸದಂತೆ ಸಿಬ್ಬಂದಿಯ ಎಚ್ಚರಿಕೆ ; ರಾತ್ರೋರಾತ್ರಿ ಹಾಸ್ಟೆಲ್ ತೊರೆದ SSLC ವಿದ್ಯಾರ್ಥಿನಿಯರು!
ಬಾಗಲಕೋಟೆ, ಡಿ. 12: ಹಾಸ್ಟೆಲ್ ನಲ್ಲಿ ಮೊಬೈಲ್ ಫೋನ್ ಬಳಕೆ ಮಾಡಬಾರದು ಎಂದು ಸಿಬ್ಬಂದಿ ಎಚ್ಚರಿಸಿದ ವಿಷಯಕ್ಕೆ ಕೋಪಗೊಂಡ ನಾಲ್ವರು SSLC ವಿದ್ಯಾರ್ಥಿನಿಯರು ರಾತ್ರೋರಾತ್ರಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಘಟನೆ ನವನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ತಕ್ಷಣ ಶೋಧ ಕಾರ್ಯ ಆರಂಭಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಾಲಕಿಯರನ್ನು ವಿಜಯಪುರದಲ್ಲಿ ಪತ್ತೆ ಹಚ್ಚಿ ಸುರಕ್ಷಿತವಾಗಿ ಕರೆತಂದಿದ್ದಾರೆ.
ಮಂಗಳವಾರ ರಾತ್ರಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರು ಮೊಬೈಲ್ ಬಳಸುತ್ತಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ಇದಕ್ಕೆ ಆಕ್ರೋಶಗೊಂಡ ಸಿಬ್ಬಂದಿ, “ಇದನ್ನು ಪೋಷಕರಿಗೆ ತಿಳಿಸುತ್ತೇನೆ” ಎಂದು ಎಚ್ಚರಿಸಿದ್ದಾರಂತೆ. ಈ ಮಾತಿಗೆ ಬೇಸರಗೊಂಡ ನಾಲ್ವರು 10ನೇ ತರಗತಿ ವಿದ್ಯಾರ್ಥಿನಿಯರು ರಾತ್ರಿ 8 ಗಂಟೆ ಸುಮಾರಿಗೆ ಹಾಸ್ಟೆಲ್ ಬಿಟ್ಟು ಹೊರಟಿದ್ದಾರೆ. ಘಟನೆ ತಿಳಿದ ಸಿಬ್ಬಂದಿ ಕೂಡಲೇ ಮಹಿಳಾ ಠಾಣೆಯನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು.
ದೂರು ದಾಖಲಾದ ಕೂಡಲೇ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದರು. ಬಾಗಲಕೋಟೆಯಿಂದ ಹುನಗುಂದಕ್ಕೆ ತೆರಳಿದ್ದ ಬಳಿಕ ವಿದ್ಯಾರ್ಥಿನಿಯರು ವಿಜಯಪುರಕ್ಕೆ ಬಸ್ ಮೂಲಕ ಪ್ರಯಾಣಿಸಿದ್ದರ ಮಾಹಿತಿ ಲಭಿಸಿದ ಮೇಲೆ, ವಿಜಯಪುರ ಬಸ್ ನಿಲ್ದಾಣದ ಬಳಿ ಅವರನ್ನು ಪತ್ತೆ ಮಾಡಲಾಗಿದೆ. ನಡು ರಾತ್ರಿ 12.30ರ ಸಮಯದಲ್ಲಿ ನಾಲ್ವರು ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು, ಬಾಗಲಕೋಟೆಗೆ ಕರೆತರಲಾಯಿತು.
ಮೋರಾರ್ಜಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆಗೆ ನಿಷೇಧವಿದೆ. ಆದಾಗ್ಯೂ, ವಿದ್ಯಾರ್ಥಿನಿಯರಲ್ಲಿ ಒಬ್ಬಳು ಮೊಬೈಲ್ ತಂದು, ನಾಲ್ವರೂ ಸೇರಿ ಬಳಸುತ್ತಿದ್ದಾಗ ಸಿಬ್ಬಂದಿಗೆ ಸಿಕ್ಕಿಬಿದ್ದಿರುವುದು ತಿಳಿದುಬಂದಿದೆ.
