ಚಳಿ ಕಾಯಲು ಕೋಣೆಯಲ್ಲಿ ಇದ್ದಿಲಿನ ಬೆಂಕಿ: ಮೂವರು ಯುವಕರು ಸಾವು
ಬೆಳಗಾವಿ: ಇಲ್ಲಿನ ಅಮ್ಮನಗರದಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ಚಳಿಯಿಂದ ರಕ್ಷಣೆಗೆ ಕೋಣೆಯೊಳಗೆ ಇದ್ದಿಲಿನ ಬೆಂಕಿ ಇಟ್ಟು ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವನ್ನಪ್ಪಿದವರನ್ನು ರಿಹಾನ್ (22), ಮೋಹಿನ್ ನಾಲಬಂದ (23) ಮತ್ತು ಸರ್ಫರಾಜ್ ಹರಪ್ಪನಹಳ್ಳಿ (22) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಅಸ್ವಸ್ಥಗೊಂಡಿರುವ ಶಾಹನವಾಜ್ (19) ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಾತ್ರಿ ಮನೆಗೆ ಮರಳಿದ ನಾಲ್ವರು, ತೀವ್ರ ಚಳಿಯಿಂದ ತಪ್ಪಿಸಿಕೊಳ್ಳಲು ಇದ್ದಿಲನ್ನು ಕಾಯಿಸಿ ಕೋಣೆಯೊಳಗೆ ಬೆಂಕಿ ಇಟ್ಟು ಮಲಗಿದ್ದಾರೆ. ನಿದ್ರೆಗೆ ಜಾರಿದ ಬಳಿಕ ಕೋಣೆಯೊಳಗೆ ಹೊಗೆ ತುಂಬಿಕೊಂಡು, ಆಮ್ಲಜನಕದ ಕೊರತೆಯಿಂದ ಉಸಿರಾಟದ ತೊಂದರೆ ಉಂಟಾಗಿದೆ. ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಯುವಕನು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಘಟನೆ ತಿಳಿದ ತಕ್ಷಣ ಮಾಳಮಾರುತಿ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
