ಹುಲಿ ದಾಳಿ ಆತಂಕ | ನಾಗರಹೊಳೆ–ಬಂಡೀಪುರ ಸಫಾರಿ, ಚಾರಣ ತಕ್ಷಣದಿಂದಲೇ ಬಂದ್: ಸಚಿವ ಈಶ್ವರ ಖಂಡ್ರೆ ನಿರ್ದೇಶನ
ಮೈಸೂರು: ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳಲ್ಲಿ ನಡೆದಿರುವ ನಿರಂತರ ಹುಲಿ ದಾಳಿಯಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇತ್ತೀಚಿನ ಘಟನೆಯ ಹಿನ್ನೆಲೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಎರಡೂ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿದ್ದ ಸಫಾರಿ ಹಾಗೂ ಮಾನವ–ವನ್ಯಜೀವಿ ಸಂಘರ್ಷ ಪ್ರದೇಶಗಳಲ್ಲಿ ನಡೆಯುತ್ತಿದ್ದ ಚಾರಣ (ಟ್ರೆಕ್ಕಿಂಗ್) ಕಾರ್ಯವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.
ಸರಗೂರು ತಾಲ್ಲೂಕಿನ ಮೊಳೆಯೂರು ವಲಯದ ಹಳೆ ಹೆಗ್ಗೋಡಿಲು ಗ್ರಾಮದ ಬಳಿ ಇಂದು ಬೆಳಗ್ಗೆ ಚೌಡಯ್ಯ ನಾಯ್ಕ (35) ಎಂಬುವವರು ಹುಲಿ ದಾಳಿಗೆ ಬಲಿಯಾದ ಘಟನೆ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ಖಂಡ್ರೆ ತೀವ್ರ ನೋವು ವ್ಯಕ್ತಪಡಿಸಿದ್ದು, ತಕ್ಷಣವೇ ಹುಲಿಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಅರಣ್ಯ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಅರಣ್ಯ ಅಂಚು ಪ್ರದೇಶಗಳಲ್ಲಿ ಮೂವರು ಹುಲಿ ದಾಳಿಗೆ ಬಲಿಯಾದ ಘಟನೆಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಸಚಿವ ಖಂಡ್ರೆ ಅವರು ಅಕ್ಟೋಬರ್ 27ರಂದು ಬಂಡೀಪುರದಲ್ಲಿ ಹಾಗೂ ನವೆಂಬರ್ 2ರಂದು ಚಾಮರಾಜನಗರದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಸಭೆ ನಡೆಸಿ ಹುಲಿ ಸೆರೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದಾಗ್ಯೂ ಮತ್ತೊಂದು ದಾರುಣ ಘಟನೆ ನಡೆದಿರುವುದರಿಂದ ಸಫಾರಿಯನ್ನು ತಕ್ಷಣದಿಂದಲೇ ಬಂದ್ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವರ ನಿರ್ದೇಶನದಂತೆ ಸಫಾರಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಲ್ಲಾ ಅಧಿಕಾರಿಗಳು, ವಾಹನ ಚಾಲಕರು ಹಾಗೂ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಆದೇಶಿಸಲಾಗಿದೆ. ಜೊತೆಗೆ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಹಾಗೂ ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪದೆಪದೆ ದಾಳಿ ನಡೆಸುತ್ತಿರುವ ಹುಲಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಜನರ ಸುರಕ್ಷತೆ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಕಣ್ಣಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ಆದೇಶದವರೆಗೆ ನಾಗರಹೊಳೆ ಮತ್ತು ಬಂಡೀಪುರ ಸಫಾರಿ ಹಾಗೂ ಚಾರಣ ಸ್ಥಗಿತಗೊಳಿಸಲಾಗಿದೆ.
