ಪ್ರೀ ವೆಡ್ಡಿಂಗ್‌ ಶೂಟಿಂಗ್‌ ಮುಗಿಸಿ ವಾಪಸಾಗುತ್ತಿದ್ದಾಗ ದುರಂತ: ವಧು–ವರ ಅಪಘಾತದಲ್ಲಿ ಮೃತ್ಯು

ಪ್ರೀ ವೆಡ್ಡಿಂಗ್‌ ಶೂಟಿಂಗ್‌ ಮುಗಿಸಿ ವಾಪಸಾಗುತ್ತಿದ್ದಾಗ ದುರಂತ: ವಧು–ವರ ಅಪಘಾತದಲ್ಲಿ ಮೃತ್ಯು

ಕೊಪ್ಪಳ, ಡಿ. 08: ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ವಧು–ವರ ಜೋಡಿಯ ಕನಸುಗಳನ್ನೆಲ್ಲ ಛಿದ್ರವಾದ ಭೀಕರ ರಸ್ತೆ ಅಪಘಾತ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ದಾಸನಾಳ ಸಮೀಪ ಲಾರಿ–ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುನಿರಾಬಾದ್‌ನ ಪಂಪಾವನದಲ್ಲಿ ಪ್ರೀ ವೆಡ್ಡಿಂಗ್‌ ಶೂಟಿಂಗ್‌ ಮುಗಿಸಿ ವಾಪಾಸಾಗುತ್ತಿದ್ದ ಕರಿಯಪ್ಪ ಇರಕಲ್‌ ಗಡದ (26) ಹಾಗೂ ಅವರ ವಧು ಕವಿತಾ ಪವಾಡೆಪ್ಪ ಮಡಿವಾಳ (19) ದುರಂತಕ್ಕೆ ಬಲಿಯಾದ ಜೋಡಿ. ಕಾರಟಗಿ ತಾಲೂಕಿನ ಮುಷ್ಠೂರು ಗ್ರಾಮದ ನಿವಾಸಿಯಾದ ಕವಿತಾಳನ್ನು ಮನೆಗೆ ಬಿಟ್ಟು ಬರಲು ಕರಿಯಪ್ಪ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಡಿಸೆಂಬರ್ 20–21ರಂದು ಜೋಡಿಯ ಮದುವೆ ನಿಗದಿಯಾಗಿತ್ತು. ಮದುವೆ ಸಂಭ್ರಮದ ಕನಸುಗಳನ್ನು ಹೊತ್ತಿದ್ದ ಜೋಡಿಗೆ ವೇಗವಾಗಿ ಬಂದ ಲಾರಿ ‘ಯಮದೂತ’ವಾಗಿ ಜೀವ ತೆಗೆದಿದೆ. ಘಟನೆಯ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.