ತೋಟ ಕಾಯಲು ಬಿಟ್ಟಿದ್ದ ರಾಟ್‌ವೀಲರ್ ಶ್ವಾನಗಳ ದಾಳಿಗೆ ಮಹಿಳೆ ಬಲಿ
ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ತೋಟದ ಕಾವಲಿಗಾಗಿ ಬಿಟ್ಟಿದ್ದ ರಾಟ್‌ವೀಲರ್ ಜಾತಿಯ ಶ್ವಾನಗಳು ನಡೆಸಿದ ದಾಳಿಗೆ 38 ವರ್ಷದ ಮಹಿಳೆಯೊಬ್ಬರು ಬಲಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಅನಿತಾ ಎಂದು ಗುರುತಿಸಲಾಗಿದೆ.
ಮಲ್ಲಶೆಟ್ಟಿಹಳ್ಳಿಯಿಂದ ಮನೆ ಕಡೆ ನಡೆದುಕೊಂಡು ಹೋಗುತ್ತಿದ್ದ ಅನಿತಾ ಮೇಲೆ ಎರಡು ರಾಟ್‌ವೀಲರ್ ಶ್ವಾನಗಳು ಇದ್ದಕ್ಕಿದ್ದಂತೆ ಎರಗಿ ಗಂಭೀರವಾಗಿ ಕಚ್ಚಿವೆ. ಸ್ಥಳೀಯರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸುವ ವೇಳೆ ದಾರಿ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಹಂದಿಹಿಡಿಯುವ ಸಿಬ್ಬಂದಿ ದಾಳಿಗೆ ಕಾರಣವಾದ ನಾಯಿಗಳನ್ನು ಸೆರೆಹಿಡಿದಿದ್ದು, ನಾಯಿಗಳನ್ನು ರಾತ್ರಿ ವೇಳೆ ಆಟೋದಲ್ಲಿ ತಂದು ತೋಟದಲ್ಲಿ ಬಿಟ್ಟಿದ್ದ ಮಾಲೀಕರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ತೀವ್ರ ಕಿಡಿ ಕಾರಿದ್ದಾರೆ.
ಮೃತರಿಗೆ ಎರಡು ಹೆಣ್ಣುಮಕ್ಕಳು ಮತ್ತು ಒಂದು ಗಂಡುಮಗು ಇದ್ದು, ಕುಟುಂಬವು ಘಟನೆಯಿಂದ ತೀವ್ರ ಆಘಾತದಲ್ಲಿ ಮುಳುಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ನಾಯಿಗಳ ಮಾಲೀಕರ ಪತ್ತೆಗೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
