ರಾಟ್‌ವೀಲರ್ ದಾಳಿಗೆ ಮಹಿಳೆ ಬಲಿ: ಶ್ವಾನಗಳ ಮಾಲೀಕ ಶೈಲೇಂದ್ರ ಕುಮಾರ್ ಬಂಧನ
ದಾವಣಗೆರೆ, ಡಿ.7: ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಡಿ.5ರಂದು ನಡೆದ ರಾಟ್‌ವೀಲರ್ ನಾಯಿಗಳ ದಾಳಿಯಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನಗಳ ಮಾಲೀಕರಾದ ಶೈಲೇಂದ್ರ ಕುಮಾರ್ ಅವರನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಮಲ್ಲಶೆಟ್ಟಿಹಳ್ಳಿಯ ಅನಿತಾ (38) ಅವರು ತೋಟದ ದಾರಿಯಲ್ಲಿ ಸಾಗುತ್ತಿದ್ದಾಗ ಎರಡು ರಾಟ್‌ವೀಲರ್ ನಾಯಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿತ್ತು. ತಕ್ಷಣವೇ ಅವರು ಮೃತಪಟ್ಟಿದ್ದರು. ಘಟನೆಯ ಬಳಿಕ ಶಾಸಕ ಕೆ.ಎಸ್. ಬಸವಂತಪ್ಪ ಅವರ ಸೂಚನೆಯ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿ ತನಿಖೆ ತೀವ್ರಗೊಳಿಸಿದ್ದರು.
ಶೈಲೇಂದ್ರ ಹಲವು ವರ್ಷಗಳಿಂದ ರಾಟ್‌ವೀಲರ್ ಶ್ವಾನಗಳನ್ನು ಸಾಕುತ್ತಿದ್ದು, ಡಿ.5ರಂದು ಆಟೋದಲ್ಲಿ ತರಿಸಿಕೊಂಡು ಜಮೀನಿನಲ್ಲಿ ಬಿಟ್ಟು ಹೋಗಿದ್ದರೆಂಬ ಮಾಹಿತಿ ಪೊಲೀಸರು ತಿಳಿಸಿದ್ದಾರೆ. ದಾಳಿ ಬಳಿಕ ಗ್ರಾಮಸ್ಥರು ಹಾಗೂ ಹಂದಿ ಹಿಡಿಯುವ ತಂಡವು ಶ್ವಾನಗಳನ್ನು ಸೆರೆ ಹಿಡಿದ ಸಂದರ್ಭದಲ್ಲಿ ಅವು ತೀವ್ರ ಆಘಾತಕ್ಕೊಳಗಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮೃತ ಅನಿತಾಳ ನಾಲ್ಕು ಮಕ್ಕಳು ಅನಾಥರಾಗಿದ್ದು, ಇವರ ಜವಾಬ್ದಾರಿಯನ್ನು ವಹಿಸಲು ಚಿತ್ರದುರ್ಗ ಭೋವಿಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮುಂದಾಗಿದ್ದಾರೆ. ಕುಟುಂಬದವರೊಂದಿಗೆ ಮಾತನಾಡಿದ ಸ್ವಾಮೀಜಿ, ಮಕ್ಕಳ ಶಿಕ್ಷಣ–ಪೋಷಣೆಯ ಹೊಣೆಗಾರಿಕೆಯನ್ನು ಸ್ವೀಕರಿಸುವುದಾಗಿ ಭರವಸೆ ನೀಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.
