ಎಚ್‌ಎಎಲ್ ನಿರ್ಮಾಣವಾಗಿದ್ದು ಕನ್ನಡಿಗರಿಂದ, ಅದು ನಮ್ಮ ಕನ್ನಡದ ಆಸ್ತಿ: ಯದುವೀರ್ ಒಡೆಯರ್ ಯಾವುದೇ ಕಾರಣಕ್ಕೂ ಇದರ ಸ್ಥಳಾಂತರಕ್ಕೆ ಅವಕಾಶ ಕೊಡಬಾರದು, ಇದು ನೆಹರೂ ಮಾಡಿದ್ದಲ್ಲ: ಸಂಸದರ ತಿರುಗೇಟು
ಮೈಸೂರು: ನಮ್ಮ ಕರ್ನಾಟಕದ ಅತ್ಯಂತ ಹೆಮ್ಮೆಯ ಸಂಸ್ಥೆಯು ರಾಜ್ಯದ ಹೆಮ್ಮೆಯಾಗಿದೆ. ಇದನ್ನು ನಿರ್ಮಾಣ ಮಾಡಿರುವುದೇ ಕನ್ನಡಿಗರು. ಜವಾಹರ ಲಾಲ್ ನೆಹರೂ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದುವೀರ್, ದೇಶದ ಅತ್ಯಂತ ಹೆಮ್ಮೆಯ ಸಂಸ್ಥೆಯಾಗಿರುವ ಎಚ್‌ಎಚ್‌ಎಲ್ ಅನ್ನು ಕೊಂಡೊಯ್ಯಬೇಕು ಎಂದು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ರಾಜ್ಯಗಳು ಮನವಿ ಸಲ್ಲಿಸಿವೆ. ಆದರೆ ಇದನ್ನು ಯಾವುದೇ ಕಾರಣಕ್ಕೂ ಕರ್ನಾಟಕದಿಂದ ಹೊರಹೋಗುವುದಕ್ಕೆ ಬಿಡುವುದಿಲ್ಲ ಎಂದರು.
1940ರಲ್ಲಿ ಈ ಸಂಸ್ಥೆ ಸ್ಥಾಪಿಸಬೇಕು ಎಂದು ಇಂಟರ್ ಕಾಂಟಿನೆಂಟ್ ಕಾರ್ಪ್ ಅಧ್ಯಕ್ಷ ವಿಲಿಯಂ ಡಿ. ಪಾವ್ಲಿ, ವಾಲ್‌ಚಂದ್ ಅವರು ಪ್ರಸ್ತಾಪಿಸಿದಾಗ ಮೈಸೂರಿನ ಮಹಾರಾಜರು ಇದಕ್ಕೆ ಒಪ್ಪಿಗೆ ಸೂಚಿಸಿದರು. ಅಂದು ಸುಮಾರು 700 ಎಕರೆಗಳನ್ನು ಉಚಿತವಾಗಿ ನೀಡಿತು. ಕನ್ನಡಿಗರಿಗೆ ಸೇರಿ ಇದನ್ನು ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಂಸದರು ವಿವರಿಸಿದರು.1964ರಲ್ಲಿ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಈ ಸಂಸ್ಥೆಯನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಲಾಯಿತು ಎಂದು ಯದುವೀರ್ ತಿಳಿಸಿದರು.
ಇಂಥ ಸಂಸ್ಥೆಯು ಇಲ್ಲಿಯೇ ಇರಬೇಕು. ಇದರ ಅಭಿವೃದ್ಧಿಗೆ ಎಲ್ಲ ಸೌಕರ್ಯಗಳನ್ನು ಒದಗಿಸಲು ನಾವು ಸಜ್ಜಾಗಿದ್ದೇವೆ ಎಂದು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವವರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಕೇಂದ್ರ ಸರ್ಕಾರಕ್ಕೆ ನಾವು ಕೂಡ ಮನವರಿಕೆ ಮಾಡಿಕೊಡುತ್ತೇವೆ ಎಂದರು.ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿಗಳು ಗೈರು ಹಾಜರಾಗಿದ್ದರು. ಈ ಸಭೆಯಲ್ಲಿ ಭಾಗವಹಿಸಿ ಕರ್ನಾಟಕದ ಪರವಾಗಿ ಮಾತನಾಡಬೇಕಿತ್ತು. ಆದರೆ ಈಗ ಕೇಂದ್ರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈಗಾಗಲೇ ಗೈರು ಹಾಜರಿ ಬಗ್ಗೆ ಎಲ್ಲ ಕಡೆ ಪ್ರಶ್ನಿಸಲಾಗಿದೆ ಎಂದು ಯದುವೀರ್ ವಿವರಿಸಿದರು.
ಕನ್ನಡಿಗರಿಂದ, ಕನ್ನಡಿಗರ ನಾಯಕತ್ವದಲ್ಲಿ ಬೆಳೆದಿರುವ ಈ ಸಂಸ್ಥೆಯನ್ನು ಸಂರಕ್ಷಣೆ ಮಾಡುವ ಬಗ್ಗೆ, ಈ ಎಚ್‌ಎಎಲ್ ಕಾರ್ಯಾನೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮುಂದುವರಿಯಲೇಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಒತ್ತಡ ಹೇರೇಕು ಎಂದು ಸಂಸದರು ತಿಳಿಸಿದರು.
ಡಿಕೆಶಿ ಹೇಳಿಕೆಗೆ ಯದುವೀರ್ ಆಕ್ಷೇಪ:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿಕೆ ನೀಡಿ, ಎಚ್‌ಎಎಲ್ ನೆಹರೂ ಅವರ ಕೊಡುಗೆ ಎಂದಿದ್ದಾರೆ. ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಲು ಬಯಸಿದ್ದು, ವಾಲ್‌ಚಂದ್ ಅವರು ಇಂಥ ಸಂಸ್ಥೆ ಬೇಕು ಎಂದು ಪ್ರಸ್ತಾಪಿಸಿದ್ದರು. ಇದಕ್ಕೆ ನಮ್ಮ ಮೈಸೂರು ಮಹಾರಾಜರು ಸ್ಪಂದಿಸಿ 700 ಎಕರೆ ಜಮೀನು ಮಂಜೂರು ಮಾಡಿದರು. ನಮ್ಮ ಮೈಸೂರು ಮಹಾರಾಜರು ಇದಕ್ಕೆ ಬಂಡವಾಳ ಹೂಡಿದರು ಎಂದು ಮಾಹಿತಿ ನೀಡಿದರು.ಎರಡನೇ ಮಹಾಯುದ್ಧದಲ್ಲಿ ಎಚ್‌ಎಎಲ್ ಬೃಹತ್ ಕೊಡುಗೆಗಳನ್ನು ನೀಡಿದೆ. ಭಾರತದ ಇತಿಹಾಸದಲ್ಲಿ ಎಚ್‌ಎಎಲ್ ಕೊಡುಗೆ ಸದಾ ಸ್ಮರಣೀಯ ಎಂದು ಯದುವೀರ್ ತಿಳಿಸಿದರು.
