ಕುಡಿದ ಅಮಲಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಬ್ಬರ ನಡುವೆ ಹೊಡೆದಾಟ

ಕುಡಿದ ಅಮಲಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಬ್ಬರ ನಡುವೆ ಹೊಡೆದಾಟ

ಹಾಸನ: ಕುಡಿದ ಅಮಲಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಬ್ಬರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗೋವಿನಕೆರೆ ಗ್ರಾಮದ ಗ್ರಾಪಂ ಸದಸ್ಯರೊಬ್ಬರ ಮನೆಯಲ್ಲಿ ಆ. 28ರಂದು ನಡೆದಿದೆ. ಹಿರೀಸಾವೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ ಹಾಗೂ ಎಂ. ಶಿವರ ಗ್ರಾ.ಪಂ. ಪಿಡಿಓ ರಾಮಸ್ವಾಮಿ ನಡುವೆ ಜಗಳ ನಡೆದಿದೆ. ಸತೀಶ ಅವರ ತಲೆಗೆ ಮದ್ಯದ ಬಾಟಲಿಯಿಂದ ರಾಮಸ್ವಾಮಿ ಹೊಡೆದಿದ್ದಾರೆ. ಸತೀಶ ಅವರಿಗೆ ಗಂಭೀರ ಏಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಎಂ. ಶಿವರ ಗ್ರಾ.ಪಂ. ಸದಸ್ಯ, ಗೋವಿನಕೆರೆ ಗ್ರಾಮದ ರಾಮು ಅವರ ಮನೆಗೆ ಗಣೇಶ ಹಬ್ಬದ ನಿಮಿತ್ತ ಊಟಕ್ಕೆಂದು ಸತೀಶ ಬಂದಿದ್ದರು. ರಾಮು, ರಘು ಅವರು ಮದ್ಯ ಸೇವನೆ ಮಾಡುತ್ತಾ ಕುಳಿತಿದ್ದಾಗ ಆಹ್ವಾನದ ಮೇರೆಗೆ ರಾಮಸ್ವಾಮಿ ಸಹ ಬಂದಿದ್ದರು. ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ವಿಚಾರವಾಗಿ ಅಧಿಕಾರಿಗಳಿಬ್ಬರ ನಡುವೆ ವೈಮನಸ್ಸು ಉಂಟಾಗಿ ಮಾತನಾಡುತ್ತಿರಲಿಲ್ಲ. ಮದ್ಯ ಸೇವನೆ ಮಾಡುತ್ತಾ ಕುಳಿತಿದ್ದಾಗ ರಾಮು, ಶಿವರಾಜ್‌ ಅವರು ಜಗಳ ಬಿಟ್ಟು ಇಬ್ಬರು ಮಾತನಾಡಿಕೊಂಡಿರಿ ಎಂದು ಸಲಹೆ ನೀಡಿದ್ದಾರೆ. ಅದಕ್ಕೆ ಸತೀಶ್‌, ಅದರ ಬಗ್ಗೆ ಈಗ ಮಾತನಾಡುವುದು ಬೇಡ ಸುಮನಿರಿ ಎಂದಿದ್ದಾರೆ. ಅಷ್ಟಕ್ಕೆ ಆಕ್ರೋಶಗೊಂಡ ರಾಮಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಎದುರಿಗೆ ಇದ್ದ 750 ಎಂ.ಎಲ್‌.ನ ಮ್ಯಾನ್ಸಿನ್‌ ಹೌಸ್‌‍ ಬ್ರಾಂಡಿ ಗಾಜಿನ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ. ಗಾಜಿನ ಚೂರು ಮುಖಕ್ಕೆ ಬಿದ್ದು ಏಟಾಗಿದೆ. ಜೊತೆಗಿದ್ದವರೂ ಜಗಳ ಬಿಡಿಸಿ ಇಬ್ಬರನ್ನೂ ಅಲ್ಲಿಂದ ಕಳುಹಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.