ಕಚೇರಿಯ ಲೈಟ್ ಆಫ್ ಮಾಡುವ ವಿಚಾರಕ್ಕೆ ಆರಂಭವಾದ ಗಲಾಟೆ ಸಹೋದ್ಯೋಗಿಯ ಕೊಲೆಯಲ್ಲಿ ಅಂತ್ಯ
ಬೆಂಗಳೂರು, ನ.3: ಕಚೇರಿಯ ಲೈಟ್ ಆಫ್ ಮಾಡುವ ವಿಚಾರದಲ್ಲಿ ನಡೆದ ಸಣ್ಣ ವಿವಾದ ಕೊಲೆಯಲ್ಲಿ ಅಂತ್ಯವಾದ ಹೃದಯ ಕಲುಕುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಭೀಮೇಶ್ ಬಾಬು (41) ಮೃತಪಟ್ಟಿದ್ದು, ವಿಜಯವಾಡ ಮೂಲದ ಸೋಮಲ ವಂಶಿ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರೂ ಸಿನಿಮಾ ಚಿತ್ರೀಕರಣದ ವೀಡಿಯೊಗಳನ್ನು ಸಂಗ್ರಹಿಸುವ ಖಾಸಗಿ ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 31ರ ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ಕಚೇರಿಯ ಲೈಟ್ ಆಫ್ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ.
ಅದರಿಂದ ಕೋಪಗೊಂಡ ಸೋಮಲ ವಂಶಿ ಹತ್ತಿರದಲ್ಲಿದ್ದ ಮಾರಕಾಸ್ತ್ರದಿಂದ ಭೀಮೇಶ್ ಬಾಬುವಿನ ತಲೆಯ ಭಾಗಕ್ಕೆ ಹೊಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯದ ಬಳಿಕ ಆತಂಕಗೊಂಡ ಸೋಮಲ ವಂಶಿ ತಾನೇ ತಾತೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.
ಘಟನೆಯ ಕುರಿತು ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
