ಆಕೆ ಗರ್ಭಿಣಿಯಾಗಲು ನಾನು ಕಾರಣವಲ್ಲ ಎಂದು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಆಕೆ ಗರ್ಭಿಣಿಯಾಗಲು ನಾನು ಕಾರಣವಲ್ಲ ಎಂದು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

ಮೈಸೂರು, ನ.3: ಶಾಲಾ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದಕ್ಕೆ “ನಾನು ಕಾರಣನಲ್ಲ” ಎಂದು ವಾಯ್ಸ್ ನೋಟ್ ನಲ್ಲಿ ಹೇಳಿದ ಯುವಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದ ತುಂಗಾ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ರಾಮು (27) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ವಾಯ್ಸ್ ನೋಟ್ ರೆಕಾರ್ಡ್ ಮಾಡಿದ ರಾಮು, ತನ್ನ ಮೇಲಿನ ಆರೋಪಗಳು ಸುಳ್ಳು ಎಂದು ಹೇಳಿಕೊಂಡಿದ್ದಾನೆ. “ವಿದ್ಯಾರ್ಥಿನಿಯು ಗರ್ಭಿಣಿಯಾಗಿದ್ದಕ್ಕೆ ನಾನು ಕಾರಣನಲ್ಲ. ಶಾಲೆಯ ಪಿಟಿ ಮಾಸ್ತರೇ ಈ ಘಟನೆಯ ಮೂಲ ಕಾರಣ. ಡಿಎನ್ಎ ಪರೀಕ್ಷೆ ಮಾಡಿದರೆ ಸತ್ಯ ಬಹಿರಂಗವಾಗುತ್ತದೆ,” ಎಂದು ಆತ ವಾಯ್ಸ್ ನೋಟ್‌ನಲ್ಲಿ ಹೇಳಿದ್ದಾನೆ.

ಅಲ್ಲದೇ, “ಹುಡುಗಿಯನ್ನು ಮಾತನಾಡಿದ್ದಕ್ಕೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ಈ ಆರೋಪದಿಂದಾಗಿ ನನಗೆ ಬದುಕಲು ಆಗುತ್ತಿಲ್ಲ. ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಮನವಿ ಮಾಡಿಕೊಂಡಿದ್ದಾನೆ.

ಅಕ್ಟೋಬರ್ 31ರಂದು ವಾಯ್ಸ್ ನೋಟ್ ಕಳುಹಿಸಿದ ಬಳಿಕ ರಾಮು ನಾಪತ್ತೆಯಾಗಿದ್ದ. ಇದೀಗ ಬೆಟ್ಟದ ತುಂಗಾ ನಾಲೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಸ್ಥಳದಿಂದ ಬೈಕ್, ಚಪ್ಪಲಿ, ಮೊಬೈಲ್ ಹಾಗೂ ಜರ್ಕಿನ್ ಪತ್ತೆಯಾಗಿದೆ.

ವಿದ್ಯಾರ್ಥಿನಿಯ ಗರ್ಭಿಣಿಯಾದ ವಿಚಾರ ಬಯಲಾಗುತ್ತಿದ್ದಂತೆಯೇ ಶಾಲಾ ವಲಯದಲ್ಲಿ ಚರ್ಚೆ ಆರಂಭವಾಗಿತ್ತು. ಶಾಲೆಗೆ ಕಳಂಕ ಬಾರದಂತೆ ಕೆಲವರು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಡಿಎನ್ಎ ಪರೀಕ್ಷೆ ಸೇರಿದಂತೆ ತನಿಖೆ ಮುಂದುವರಿಸಿದ್ದಾರೆ.