ಇನ್‌ಸ್ಟಾಗ್ರಾಂನಲ್ಲಿ ಮದುವೆ ಪೋಸ್ಟ್ ನೋಡಿ ಧಾವಿಸಿದ ಯುವತಿ: ಪ್ರಿಯಕರನ ಮದುವೆ ಮಂಟಪದಲ್ಲೇ ರದ್ದು

ಇನ್‌ಸ್ಟಾಗ್ರಾಂನಲ್ಲಿ ಮದುವೆ ಪೋಸ್ಟ್ ನೋಡಿ ಧಾವಿಸಿದ ಯುವತಿ: ಪ್ರಿಯಕರನ ಮದುವೆ ಮಂಟಪದಲ್ಲೇ ರದ್ದು
ಸಾಂದರ್ಭಿಕ ಚಿತ್ರ

ರಾಯಚೂರು, ಡಿ. 12: ಪ್ರೀತಿ ಹೆಸರಿನಲ್ಲಿ ಮೋಸ ಮಾಡಿದ ಯುವಕನ ಮದುವೆಯನ್ನು ಸಂತ್ರಸ್ತ ಯುವತಿ ಮಂಟಪದಲ್ಲೇ ಅಡ್ಡಿಪಡಿಸಿದ ಘಟನೆ ರಾಯಚೂರು ನಗರದಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ರಿಷಬ್ ಎಂಬ ಯುವಕ, ಕೊಪ್ಪಳ ಜಿಲ್ಲೆಯ ಯುವತಿಯನ್ನು ಪ್ರೀತಿಸುವ ನೆಪದಲ್ಲಿ ಮದುವೆಯಾಗುವುದಾಗಿ ಭರವಸೆ ನೀಡಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಗರ್ಭಪಾತಕ್ಕೆ ಒತ್ತಾಯಿಸಿ ಕೈಕೊಟ್ಟಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಇದೇ ನಡುವೆ ರಿಷಬ್ ಮತ್ತೊಬ್ಬ ಯುವತಿ ಜತೆ ಮದುವೆಯಾಗುತ್ತಿರುವ ಮಾಹಿತಿ ಸಂತ್ರಸ್ತೆಗೆ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ತಿಳಿದು ಬಂದಿದೆ.

ಈ ಮಾಹಿತಿ ತಿಳಿಯುತ್ತಿದ್ದಂತೆ ಯುವತಿ ರಾಯಚೂರಿಗೆ ಧಾವಿಸಿ, ಇಂದು ನಡೆಯಲಿದ್ದ ಮದುವೆಗೆ ತೆರಳಿ ಕಾರ್ಯಕ್ರಮವನ್ನು ನಿಲ್ಲಿಸಿದ್ದಾರೆ. ಬಳಿಕ ಮಹಿಳಾ ಪೊಲೀಸ್ ಠಾಣೆಯಲ್ಲಿ ರಿಷಬ್ ವಿರುದ್ಧ ದೂರು ದಾಖಲಿಸಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಂತ್ರಸ್ತೆ, “ಪ್ರೇಮದ ಮೇಲೆ ನಂಬಿಕೆ ಇಟ್ಟುಕೊಂಡ ನನ್ನನ್ನು ರಿಷಬ್ ಹೇಗೆ ಮೋಸ ಮಾಡಿದ” ಎಂಬುದನ್ನು ಹಂತ ಹಂತವಾಗಿ ವಿವರಿಸಿ ಕಣ್ಣೀರಿಟ್ಟಿದ್ದಾರೆ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.