ಮಾತು ಬಾರದ, ಕಾಲಿಲ್ಲದ ವಿಶೇಷ ಚೇತನ ಯುವತಿಯ ಮೇಲೆ ಅತ್ಯಾಚಾರ ಯತ್ನ; ಕಾಮುಕನಿಗೆ ಜನರಿಂದ ಧರ್ಮದೇಟು

ಮಾತು ಬಾರದ, ಕಾಲಿಲ್ಲದ ವಿಶೇಷ ಚೇತನ ಯುವತಿಯ ಮೇಲೆ ಅತ್ಯಾಚಾರ ಯತ್ನ; ಕಾಮುಕನಿಗೆ ಜನರಿಂದ ಧರ್ಮದೇಟು
Photo credit: X

ಬೆಂಗಳೂರು, ನ.12: ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ಮಾತು ಬಾರದ ಮತ್ತು ಕಾಲುಗಳ ಸ್ವಾಧೀನವಿಲ್ಲದ ವಿಶೇಷ ಚೇತನ ಯುವತಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಆಡುಗೋಡಿಯ ಎಂ.ಆರ್.ನಗರದಲ್ಲಿ ಬೆಳಕಿಗೆ ಬಂದಿದೆ.

ವಿಘ್ನೇಶ್ ಅಲಿಯಾಸ್ ದಾಡು (26) ಎಂಬಾತ ಗಾಂಜಾ ನಶೆಯಲ್ಲಿದ್ದ ವೇಳೆ ಈ ಅಮಾನುಷ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ನವೆಂಬರ್ 9ರಂದು ಯುವತಿಯ ಕುಟುಂಬಸ್ಥರು ಮದುವೆ ಕಾರ್ಯಕ್ರಮಕ್ಕಾಗಿ ಮನೆಯಿಂದ ಹೊರಟಿದ್ದರು. ಯುವತಿಯನ್ನು ಮನೆಯಲ್ಲಿ ಬಿಟ್ಟು ಬಾಗಿಲಿಗೆ ಚಿಲಕ ಹಾಕಿದ್ದರು. ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ನಶೆಯಲ್ಲಿದ್ದ ವಿಘ್ನೇಶ್ ಬಂದು ಚಿಲಕ ತೆರೆದು ಒಳಗೆ ನುಗ್ಗಿದ್ದಾನೆ ಎನ್ನಲಾಗಿದೆ.

ಅಷ್ಟರಲ್ಲಿ ಯುವತಿಯ ತಾಯಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ ಅನುಮಾನಗೊಂಡು ಕೂಗಿದ್ದಾರೆ. ನೆರೆಮನೆಯವರ ಸಹಾಯದಿಂದ ಬಾಗಿಲು ಒಡೆದು ಒಳಗೆ ನುಗ್ಗಿದಾಗ ಕಾಮುಕನ ಕೃತ್ಯ ಬಯಲಾಗಿದೆ. ಕೋಪಗೊಂಡ ಸ್ಥಳೀಯರು ಆರೋಪಿ ವಿಘ್ನೇಶ್ಗೆ ರಸ್ತೆಯಲ್ಲೇ ಧರ್ಮದೇಟು ನೀಡಿ ನಂತರ ಆಡುಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.