ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ: ಐದು ವರ್ಷದ ಬಾಲಕಿಯ ಗುಪ್ತಾಂಗಕ್ಕೆ ಸುಟ್ಟು ಗಾಯ; ಮಲತಾಯಿ ಬಂಧನ

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ: ಐದು ವರ್ಷದ ಬಾಲಕಿಯ ಗುಪ್ತಾಂಗಕ್ಕೆ ಸುಟ್ಟು ಗಾಯ; ಮಲತಾಯಿ ಬಂಧನ
ಬಂಧಿತ ಮಹಿಳೆ

ಪಾಲಕ್ಕಾಡ್, ಜ.9: ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆಂಬ ಕಾರಣಕ್ಕೆ ಐದು ವರ್ಷದ ಬಾಲಕಿಯನ್ನು ಮಲತಾಯಿ ಕ್ರೂರವಾಗಿ ಥಳಿಸಿ, ಬಳಿಕ ಬಿಸಿ ಮಾಡಿದ ಸ್ಟೀಲ್ ಸಾಧನದಿಂದ ಆಕೆಯ ಗುಪ್ತಾಂಗವನ್ನು ಸುಟ್ಟಿದ್ದಾಳೆ ಎನ್ನಲಾಗಿದೆ. ಈ ಘಟನೆ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್ ಸಮೀಪ ಕಳೆದ ವಾರ ನಡೆದಿದೆ.

ಅಂಗನವಾಡಿಯಲ್ಲಿ ಕುಳಿತುಕೊಳ್ಳಲು ಬಾಲಕಿಗೆ ತೀವ್ರ ತೊಂದರೆ ಆಗುತ್ತಿರುವುದನ್ನು ಗಮನಿಸಿದ ಶಿಕ್ಷಕಿ ವಿಚಾರಿಸಿದಾಗ, ಮಗು ತನ್ನ ಮೇಲೆ ನಡೆದ ಹಿಂಸೆಯನ್ನು ವಿವರಿಸಿದೆ. ನಂತರ ಮಗುವಿನ ದೈಹಿಕ ಸ್ಥಿತಿಯನ್ನು ಪರಿಶೀಲಿಸಿದ ಶಿಕ್ಷಕಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಿಹಾರ ಮೂಲದ ಮಲತಾಯಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತ ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಬಾಲ ನ್ಯಾಯ ಕಾಯ್ದೆಯ ಸಂಬಂಧಿತ ಕಲಂಗಳು ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಬಾಲಕಿ ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಯಲ್ಲಿದ್ದು, ಚಿಕಿತ್ಸೆ ಹಾಗೂ ಅಗತ್ಯ ರಕ್ಷಣೆ ಒದಗಿಸಲಾಗಿದೆ. ಈ ಹಿಂದೆ ಕೂಡ ಮಗುವಿನ ಮೇಲೆ ಹಲ್ಲೆ ನಡೆದಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.