ಕರ್ನಾಟಕದಲ್ಲಿ ಬಿಯರ್ ಮಾರಾಟ ಶೇ 19.55ರಷ್ಟು ಕುಸಿತ! ಕಾರಣವೇನು ಗೊತ್ತಾ!
ಬೆಳಗಾವಿ, ಡಿ. 08: ಬೆಳಗಾವಿ ಅಧಿವೇಶನದ ಮೊದಲ ದಿನವೇ ವಿಧಾನಪರಿಷತ್ ಕಲಾಪದಲ್ಲಿ ಅಬಕಾರಿ ನೀತಿ ಮತ್ತು ಮದ್ಯಪಾನಿಗಳ ಆರೋಗ್ಯ ರಕ್ಷಣೆಯ ವಿಷಯಗಳು ತೀವ್ರ ಚರ್ಚೆಗೆ ಗ್ರಾಸವಾದವು. ಎಂಎಲ್‌ಸಿ ಎನ್. ರವಿಕುಮಾರ್ ಮದ್ಯಪ್ರಿಯರ ಚಿಕಿತ್ಸೆಗಾಗಿಯಾದರೂ ಸರ್ಕಾರ ಅಬಕಾರಿ ಆದಾಯದಲ್ಲಿ ಶೇಕಡಾ 20ರಷ್ಟು ಹಣವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು. ಅವರ ಈ ಮನವಿಗೆ ಬಿಜೆಪಿ ಸದಸ್ಯರೂ ಧ್ವನಿಗೂಡಿಸಿದರು.
ಈ ಕುರಿತು ಲಿಖಿತ ಉತ್ತರ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, “ಮದ್ಯಪಾನಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡುವುದು ಸಾಧ್ಯವಿಲ್ಲ. ಸಂಗ್ರಹವಾಗುವ ಅಬಕಾರಿ ಆದಾಯದಲ್ಲಿ ಒಂದು ಭಾಗ ಈಗಾಗಲೇ ಆರೋಗ್ಯ ಯೋಜನೆಗಳಿಗೂ ಹೋಗುತ್ತದೆ,” ಎಂದು ಸ್ಪಷ್ಟಪಡಿಸಿದರು. ಜೊತೆಗೆ ರಾಜ್ಯದಲ್ಲಿ ಬಿಯರ್ ಮಾರಾಟ ತೀವ್ರವಾಗಿ ಕುಂಠಿತವಾಗಿರುವ ಮಾಹಿತಿ ನೀಡಿದರು.
ಬಿಯರ್ ಮಾರಾಟದಲ್ಲಿ ವರ್ಷದ ದೊಡ್ಡ ಕುಸಿತ
ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 195 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷದ ಅದೇ ಅವಧಿಗೆ ಹೋಲಿಸಿದರೆ 46–47 ಲಕ್ಷ ಕೇಸ್ ಕಡಿಮೆ, ಅಂದರೆ ಶೇಕಡಾ 19.55ರಷ್ಟು ಮಾರಾಟ ಕುಸಿತ ದಾಖಲಾಗಿದೆ.
ರಾಜ್ಯದಲ್ಲಿ ಹೆಚ್ಚಿದ ಮಳೆ ಮತ್ತು ತಂಪಾದ ವಾತಾವರಣವೇ ಈ ಕುಸಿತಕ್ಕೆ ಪ್ರಮುಖ ಕಾರಣ ಎಂದು ಸಚಿವರು ವಿವರಿಸಿದರು. ಪ್ರಸ್ತುತವೂ ಬಿಯರ್ ಕುಸಿತಟದಲ್ಲಿ ಇಳಿಕೆ ಮುಂದುವರಿದಿದೆ ಎಂದರು.
ಅಬಕಾರಿ ಆದಾಯವನ್ನು ಬಜೆಟ್ ಯೋಜನೆಗಳಿಗಷ್ಟೇ ಮೀಸಲಿಡಲಾಗುತ್ತಿದ್ದು, ಸಂಚಿತ ನಿಧಿಗೆ ಜಮೆ ಮಾಡಲಾಗುತ್ತದೆ. ಮದ್ಯಪಾನಿಗಳಿಗೆ ಪ್ರತ್ಯೇಕ ಅನುದಾನ ನೀಡಲು ಅವಕಾಶ ಇಲ್ಲ ಎಂದು ಸಚಿವ ತಿಮ್ಮಾಪುರ ತಿಳಿಸಿದ್ದಾರೆ.
ಮದ್ಯಪಾನದಿಂದ ಸಮಾಜಕ್ಕೆ ಹಾನಿ ಹೆಚ್ಚಾಗಿದೆ: ಬಿಜೆಪಿ ಟೀಕೆ
ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಸದಸ್ಯ ಕೆ.ಎಸ್. ನವೀನ್, “ಮದ್ಯಪಾನ ಈಗ ಸಾಮಾಜಿಕ ಪಿಡುಗಾಗಿದೆ. ಹಾರ್ಡ್ ಲಿಕ್ಕರ್ ಸೇವನೆಯಲ್ಲಿ ಕರ್ನಾಟಕ ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ,” ಎಂದು ಟೀಕಿಸಿದರು.
ಬಾರ್‌ಗಳು ನಿಯಮಿತ ಸಮಯಕ್ಕಿಂತ ಮೊದಲೇ ತೆರೆಯುತ್ತಿರುವ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿ, “ಪ್ರತಿ ಜಿಲ್ಲೆಗೆ ಅಬಕಾರಿ ಇಲಾಖೆ ಗುರಿ ನಿಗದಿ ಮಾಡಿರುವಂತಿದೆ. ಗುರಿ ಮುಟ್ಟದಿದ್ದರೆ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ,” ಎಂದು ಆರೋಪಿಸಿದರು.
ನವೀನ್ ಮದ್ಯಪಾನದಿಂದ ಉಂಟಾಗುತ್ತಿರುವ ಆರೋಗ್ಯ ಸಮಸ್ಯೆಗಳ ಗಂಭೀರತೆಯನ್ನೂ ಉಲ್ಲೇಖಿಸಿದರು. “ಲಿವರ್ ಡ್ಯಾಮೇಜ್ ಪ್ರಕರಣಗಳು ಹೆಚ್ಚುತ್ತಿವೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರ ಲಿವರ್ ಕಸಿ ಮಾಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಮದ್ಯವ್ಯಸನದಿಂದ ಹಲವರು ಸಾವನ್ನಪ್ಪುತ್ತಿದ್ದಾರೆ, ಕುಟುಂಬಗಳು ನಾಶವಾಗುತ್ತಿವೆ,” ಎಂದರು.
ಅದರ ಹಿನ್ನೆಲೆಯಲ್ಲಿ ಮದ್ಯಪಾನಿಗಳ ಚಿಕಿತ್ಸೆಗಾಗಿ ಅಬಕಾರಿ ಆದಾಯದಲ್ಲಿ ಶೇಕಡಾ 20ರಷ್ಟು ಮೊತ್ತ ಮೀಸಲಿಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದರು.
