ಬೆಂಗಳೂರು:ವಿರಾಜಪೇಟೆ ಮೂಲದ ಎಸ್‌ಎಸ್‌ಎಲ್‌ಸಿ ಟಾಪರ್‌ನ ಅತಿರೇಕದ ಮೋಹಕ್ಕೆ ಟೆಕ್ಕಿ‌ ಯುವತಿ ಬಲಿ; ಕಳೆದ ಎರಡು ತಿಂಗಳಿನಿಂದ ‌ವಿರಾಜಪೇಟೆಯ ಕರ್ನಲ್ ‌ಕುರೈ ಮಾಡಿದ್ದೇನು ಗೊತ್ತಾ!

ಬೆಂಗಳೂರು:ವಿರಾಜಪೇಟೆ ಮೂಲದ ಎಸ್‌ಎಸ್‌ಎಲ್‌ಸಿ ಟಾಪರ್‌ನ ಅತಿರೇಕದ ಮೋಹಕ್ಕೆ ಟೆಕ್ಕಿ‌ ಯುವತಿ ಬಲಿ;  ಕಳೆದ ಎರಡು ತಿಂಗಳಿನಿಂದ ‌ವಿರಾಜಪೇಟೆಯ ಕರ್ನಲ್ ‌ಕುರೈ ಮಾಡಿದ್ದೇನು ಗೊತ್ತಾ!
ಕರ್ನಲ್ ಕುರೈ

ಬೆಂಗಳೂರು, ಜ.14: ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 3ರಂದು ನಡೆದ ಟೆಕ್ಕಿ ಯುವತಿ ಹತ್ಯೆ ಪ್ರಕರಣದಲ್ಲಿ ಆರೋಪಿಯ ಹಿನ್ನೆಲೆ ಹಾಗೂ ಅಪರಾಧದ ಕ್ರಮ ಕುರಿತು ತನಿಖೆ ವೇಳೆ ಗಂಭೀರ ಹಾಗೂ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಆರೋಪಿ ಕರ್ನಲ್ ಕುರೈ, ಯುವತಿಯ ಮೇಲಿನ ಅತಿರೇಕದ ಮೋಹದಿಂದ ಈ ಘೋರ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.

ಪೊಲೀಸರ ಮಾಹಿತಿಯಂತೆ, ಆರೋಪಿ ಕಳೆದ ಎರಡು ತಿಂಗಳಿನಿಂದ ಯುವತಿಯ ಚಲನವಲನವನ್ನು ಗಮನಿಸುತ್ತಿದ್ದ. ಓದು ಹಾಗೂ ಬಟ್ಟೆ ಖರೀದಿ ನೆಪದಲ್ಲಿ ಟೆರಸ್‌ಗೆ ತೆರಳುತ್ತಿದ್ದ ಆತ, ಬಾಲ್ಕನಿಯ ಸ್ಲೈಡ್ ವಿಂಡೋ ಮೂಲಕ ಮನೆಯೊಳಗೆ ಪ್ರವೇಶಿಸುವ ಮಾರ್ಗವನ್ನು ಮುಂಚಿತವಾಗಿಯೇ ತಿಳಿದುಕೊಂಡಿದ್ದಾನೆ. ಜನವರಿ 3ರಂದು ಯುವತಿಯ ಸ್ನೇಹಿತೆ ಮನೆಯಲ್ಲಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಆಕೆಯ ಮನೆಗೆ ನುಗ್ಗಿ ಹತ್ಯೆ ನಡೆಸಿದ್ದಾನೆ ಎನ್ನಲಾಗಿದೆ.

ಆರೋಪಿ ಹಾಗೂ ಯುವತಿ ನಡುವೆ ಯಾವುದೇ ಹಿಂದಿನ ಪರಿಚಯ ಇರಲಿಲ್ಲ ಎಂಬುದೂ ತನಿಖೆಯಲ್ಲಿ ತಿಳಿದುಬಂದಿದೆ. ಆದರೂ, ಸ್ಲೈಡ್ ವಿಂಡೋ ತೆರೆಯುವ ತಂತ್ರ ಬಳಸಿ ನೇರವಾಗಿ ಮನೆಯೊಳಗೆ ಪ್ರವೇಶಿಸಿದ್ದಾನೆ. ಕಾಲೇಜು ದಿನಗಳಲ್ಲಿ ಸ್ಲೈಡ್ ವಿಂಡೋ ಬಾಗಿಲಿಗೆ ಪುಸ್ತಕ ಸಿಕ್ಕಿಹಾಕಿಕೊಂಡ ಸಂದರ್ಭದಿಂದ ಈ ತಂತ್ರವನ್ನು ಕಲಿತಿದ್ದನೆಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.

ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶವೂ ಬಹಿರಂಗವಾಗಿದೆ. ಆರೋಪಿ ಕರ್ನಲ್ ಕುರೈ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97 ಅಂಕ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾನೆ. ಉತ್ತಮ ವಿದ್ಯಾಭ್ಯಾಸ ಮತ್ತು ಭವಿಷ್ಯವಿದ್ದರೂ, ನಿಯಂತ್ರಣ ತಪ್ಪಿದ ಮೋಹ ಆತನನ್ನು ಅಪರಾಧದ ದಾರಿಗೆ ತಳ್ಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದಿನ ಯುವತಿ ಅಡುಗೆ ಮನೆಯಲ್ಲಿ ಹಾಲು ಕಾಯಿಸುತ್ತಿದ್ದ ವೇಳೆ ಆರೋಪಿ ಮನೆಯೊಳಗೆ ಪ್ರವೇಶಿಸಿದ್ದ. ಆತನನ್ನು ಕಂಡು ಗಾಬರಿಗೊಂಡ ಯುವತಿ ಜಗಳಕ್ಕಿಳಿದಿದ್ದು, ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ಮಧ್ಯೆ ಹಾಲು ಉಕ್ಕಿ ಸ್ಟವ್‌ನ ಬೆಂಕಿ ಆರಿಹೋಗಿದೆ. ಬಳಿಕ ಯುವತಿಯನ್ನು ಅಡುಗೆ ಕೋಣೆಯಲ್ಲೇ ಮಲಗಿಸಿ, ಕೊಠಡಿಯಲ್ಲಿ ಬೆಂಕಿ ಹಚ್ಚಿ ಆರೋಪಿ ಪರಾರಿಯಾಗಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಪ್ರಾರಂಭದಲ್ಲಿ ಗ್ಯಾಸ್ ಲೀಕ್‌ನಿಂದ ಬೆಂಕಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಮನೆಯೊಳಗಿನ ವಾತಾವರಣ ಹಾಗೂ ಕೆಲವು ಅನುಮಾನಾಸ್ಪದ ಸನ್ನಿವೇಶಗಳು ಪೊಲೀಸರಲ್ಲಿ ಸಂಶಯ ಹುಟ್ಟಿಸಿತು. ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಯುವಕರನ್ನು ವಿಚಾರಣೆ ನಡೆಸಿದಾಗ, ಯುವತಿಯ ಮೊಬೈಲ್ ಆರೋಪಿ ಬಳಿ ಪತ್ತೆಯಾಗಿದ್ದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿತು. ಈ ಸಾಕ್ಷ್ಯದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಅತಿರೇಕದ ಆಸೆ ಮತ್ತು ಮೋಹದ ಪರಿಣಾಮವಾಗಿ ಕೊಲೆಗಾರನಾಗಿ ಜೈಲು ಸೇರಿರುವುದು ಸಮಾಜಕ್ಕೆ ಎಚ್ಚರಿಕೆಯ ಸಂಗತಿಯಾಗಿದ್ದು, ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.