ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್‌ಮೇಲ್: ಡೆತ್‌ನೋಟ್ ಬರೆದಿಟ್ಟು MBA ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು, ಡಿ. 11: ಹೆಸರುಘಟ್ಟ ರಸ್ತೆಯ ಶಾಂತಿನಗರದಲ್ಲಿ ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ವಿಡಿಯೋ ಕಾಲ್ ಮೂಲಕ ನಡೆದ ಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಮೃತರನ್ನು ಕೇರಳ ಮೂಲದ ಜಗನ್ ಮೋಹನ್ (25) ಎಂದು ಗುರುತಿಸಲಾಗಿದೆ.
ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಜಗನ್, ಕಾಲೇಜು ಸಮೀಪದ ವಸತಿ ಮನೆಯಲ್ಲಿ ಏಕಾಂಗಿಯಾಗಿಯೇ ವಾಸವಿದ್ದರು. ತನ್ನ ಕೊಠಡಿಯಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಆತ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳ ಪರಿಶೀಲನೆ ವೇಳೆ ಪೊಲೀಸರಿಗೆ ಜಗನ್ ಬರೆದಿಟ್ಟಿದ್ದ ಡೆತ್‌ನೋಟ್‌ನಲ್ಲಿ ಮೂರು ಮೊಬೈಲ್ ನಂಬರ್‌ಗಳು ಪತ್ತೆಯಾಗಿವೆ. ತನಿಖೆಯಲ್ಲಿ, ಅಕ್ರಮ ವಿಡಿಯೋ ಕಾಲ್ ಮಾಡಿ ಜಗನ್‌ನ ಬೆತ್ತಲೆ ಫೋಟೋ ಹಾಗೂ ವೀಡಿಯೋಗಳನ್ನು ರೆಕಾರ್ಡ್ ಮಾಡಿ, ಅವನ್ನು ವೈರಲ್ ಮಾಡುವ ಬೆದರಿಕೆ ಹಾಕಲಾಗಿದೆ ಎಂಬುದು ತಿಳಿದುಬಂದಿದೆ.
ಬ್ಲ್ಯಾಕ್‌ಮೇಲ್‌ಗೆ ಹೆದರಿ ಜಗನ್ ₹25,000 ಅನ್ನು ಆರೋಪಿಗಳು ಕಳುಹಿಸಿದ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ನಂತರವೂ ಹೆಚ್ಚುವರಿ ಹಣಕ್ಕೆ ಒತ್ತಾಯಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಒತ್ತಡಕ್ಕೆ, ಆತ್ಮಹತ್ಯೆಗೆ ಶರಣಾಗಿರಬಹುದೆಂದು ಪ್ರಾಥಮಿಕ ಅಂದಾಜು.
ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ ನಂಬರ್‌ಗಳ ಆಧಾರದಲ್ಲಿ ಬ್ಲ್ಯಾಕ್‌ಮೇಲ್ ಜಾಲವನ್ನು ಪತ್ತೆಹಚ್ಚುವ ಕಾರ್ಯ ವಾಯುವ್ಯ ವಿಭಾಗದ ಪೊಲೀಸರು ಕೈಗೊಂಡಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 106 ಅಡಿ ಪ್ರಕರಣ ದಾಖಲಾಗಿದೆ.
