ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಲ್ತುಳಿತ ದುರಂತ | ಚಾರ್ಜ್‌ಶೀಟ್ ರೆಡಿ, RCB ನೇರ ಹೊಣೆ: CID

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಲ್ತುಳಿತ ದುರಂತ | ಚಾರ್ಜ್‌ಶೀಟ್ ರೆಡಿ, RCB ನೇರ ಹೊಣೆ:  CID
ಕಾಲ್ತುಳಿತ ದೃಶ್ಯ

ಬೆಂಗಳೂರು, ನ. 19: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭೀಕರ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಐಡಿ, 2,200ಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧಪಡಿಸಿದೆ. ಈ ದುರಂತಕ್ಕೆ RCB, ಕೆಎಸ್‌ಸಿಎ ಹಾಗೂ ಡಿಎನ್‌ಎ ಸಂಸ್ಥೆಗಳು ನೇರವಾಗಿ ಹೊಣೆ ಎಂದು ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

 ಸಿಐಡಿ ಅಧಿಕಾರಿಗಳು ವ್ಯಾಪಕ ತನಿಖೆ ನಡೆಸಿ ನೂರಾರು ಪ್ರತ್ಯಕ್ಷ ಸಾಕ್ಷ್ಯ, ಸಿಸಿಟಿವಿ ದೃಶ್ಯಗಳು, ಗಾಯಾಳುಗಳ ಹೇಳಿಕೆ ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ ಚಾರ್ಜ್‌ಶೀಟ್‌ ತಯಾರಿಸಿದ್ದಾರೆ. ಕಾರ್ಯಕ್ರಮದ ಬಗ್ಗೆ ಸಮರ್ಪಕ ಯೋಜನೆಯಿಲ್ಲದಿರುವುದು, ಟಿಕೆಟ್ ವಿತರಣೆಯ ಗೊಂದಲ ಮತ್ತು ಭದ್ರತಾ ವೈಫಲ್ಯಗಳು ಸಾವಿಗೆ ಪ್ರಮುಖ ಕಾರಣವೆಂದು ಸಿಐಡಿ ನಿಗದಿ ಮಾಡಿದೆ.

RCB ವತಿಯಿಂದ ಟಿಕೆಟ್ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಿದ್ದು, ದೊಡ್ಡ ಪ್ರಮಾಣದ ಜನಸ್ತೋಮ ಕ್ರೀಡಾಂಗಣದ ಹೊರಗೆ ಜಮಾಯಿಸಲು ಇದು ಕಾರಣವಾಗಿದೆ. ಡಿಎನ್ಎ ಸಂಸ್ಥೆಯು ಕಾರ್ಯಕ್ರಮದ ಸುರಕ್ಷತೆಗೆ ಯಾವುದೇ ಸೂಕ್ತ ಪ್ಲಾನ್ ಹೊಂದಿರಲಿಲ್ಲ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಖಾಸಗಿ ಸೆಕ್ಯುರಿಟಿ ಏಜೆನ್ಸಿಗಳ ವ್ಯವಸ್ಥೆಯೂ ವಿಫಲವಾಗಿದ್ದು, ಪೊಲೀಸರೊಂದಿಗೆ ಅಗತ್ಯ ಸಂವಹನ ನಡೆಸದೇ ಕಾರ್ಯಕ್ರಮ ಆಯೋಜನೆ ಮಾಡಿರುವುದು ಗಂಭೀರ ದೋಷವೆಂದು ಚಾರ್ಜ್‌ಶೀಟ್‌ ಹೇಳಿದೆ.

ಎಲ್ಲಾ ಗೇಟ್‌ಗಳ ಸಿಸಿಟಿವಿ ದೃಶ್ಯ, ಘಟನೆ ವೇಳೆ ಇದ್ದವರ ಹೇಳಿಕೆ, ಸೆಕ್ಯುರಿಟಿ ಸಿಬ್ಬಂದಿ ಮತ್ತು ಕರ್ತವ್ಯದಲ್ಲಿದ್ದ ಪೊಲೀಸರ ಹೇಳಿಕೆಗಳನ್ನು ತನಿಖಾ ಅಧಿಕಾರಿಗಳು ದಾಖಲಿಸಿದ್ದಾರೆ. ಗಾಯಾಳುಗಳ ಹೇಳಿಕೆ, ಅವರನ್ನು ಸ್ಥಳಾಂತರಿಸಿದವರ ಮಾಹಿತಿ ಸೇರಿದಂತೆ ಅಸಂಖ್ಯಾತ ಸಾಕ್ಷ್ಯಾಧಾರಗಳು ಈ ಚಾರ್ಜ್‌ಶೀಟ್ ನಲ್ಲಿವೆ ಎಂದು ತಿಳಿದು ಬಂದಿದೆ.

18ನೇ ಸೀಸನ್‌ನ ಐಪಿಎಲ್ ಫೈನಲ್‌ ಚಾಂಪಿಯನ್ ಆಗಿ ಬೆಂಗಳೂರಿಗೆ ಬಂದ RCB ತಂಡದ ವಿಜಯೋತ್ಸವ ಸಮಾರಂಭ ಚಿನ್ನಸ್ವಾಮಿಯಲ್ಲಿ ನಡೆಯುತ್ತಿತ್ತು. ಈ ಸಂಭ್ರಮಾಚರಣೆಯನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದು, ಗೇಟ್‌ಗಳ ಬಳಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತಕ್ಕೆ ಕಾರಣವಾಯಿತು. ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರೆ, ಅನೇಕರಿಗೆ ಗಾಯಗಳಾಗಿದ್ದವು.