ಹಾಸಿಗೆ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ: ನೆಲಕ್ಕೆ ಬಿದ್ದು ಶಿಶು ಮೃತ್ಯು

ಹಾಸಿಗೆ ಸಿಗದೆ ಕಾರಿಡಾರ್‌ನಲ್ಲೇ ಹೆರಿಗೆ: ನೆಲಕ್ಕೆ ಬಿದ್ದು ಶಿಶು ಮೃತ್ಯು

ಹಾವೇರಿ: ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದ ಕಾರಣ ಮಹಿಳೆಯೊಬ್ಬರು ಕಾರಿಡಾರ್‌ನಲ್ಲೇ ಹೆರಿಗೆ ಮಾಡಿದ ಸಂದರೌ, ಶಿಶು ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರೂಪಾ (30) ಅವರಿಗೆ ಬೆಳಿಗ್ಗೆಯಿಂದಲೇ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆರಿಗೆ ಕೊಠಡಿಯಲ್ಲಿ ಈಗಾಗಲೇ ಹೆಚ್ಚಿನ ಮಹಿಳೆಯರು ಇದ್ದ ಕಾರಣ, ಹಾಸಿಗೆಗಳ ಕೊರತೆ ಉಂಟಾಗಿದ್ದು ರೂಪಾಗೆ ಬೆಡ್ ಸಿಕ್ಕಿರಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಕಾರಿಡಾರ್‌ನಲ್ಲೇ ನೆಲದ ಮೇಲೆ ಕುಳಿತಿದ್ದ ರೂಪಾ ತೀವ್ರ ನೋವಿನಿಂದ ತತ್ತರಿಸುತ್ತಿದ್ದರೂ, ವೈದ್ಯರು ಹಾಗೂ ಶುಶ್ರೂಷಕಿಯರು ಯಾವುದೇ ಸ್ಪಂದನೆ ತೋರಲಿಲ್ಲವೆಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಹಿಳೆ ನೋವಿನಿಂದ ಕಿರುಚುತ್ತಿದ್ದರೂ ಕೆಲವರು ಮೊಬೈಲ್‌ ಫೋನ್‌ಗಳಲ್ಲಿ ಮಾತನಾಡುತ್ತಿದ್ದರು. ಯಾರೂ ಬೆಡ್‌ ಕೊಡಿಸಲು ಮುಂದಾಗಲಿಲ್ಲ,” ಎಂದು ಅವರು ಆರೋಪಿಸಿದರು.

ಬೆಳಿಗ್ಗೆ ಸುಮಾರು 9 ಗಂಟೆಗೆ ಶೌಚಾಲಯಕ್ಕೆ ತೆರಳಲು ಎದ್ದ ಮಹಿಳೆಗೆ ಮಾರ್ಗಮಧ್ಯೆಯೇ ಹೆರಿಗೆ ಪ್ರಾರಂಭವಾಗಿದ್ದು, ಶಿಶು ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಪರಿಣಾಮ, ಶಿಶು ಶ್ವಾಸ ತೆಗೆದುಕೊಳ್ಳುವ ಮುನ್ನವೇ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರು, “ಯಾರು ತಪ್ಪು ಮಾಡಿದ್ದಾರೆ ಎಂಬುದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.