ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆತ್ನಿಸಿದ ಡಬಲ್ ಮರ್ಡರ್ ಪ್ರಕರಣದ ಆರೋಪಿಗೆ ಗುಂಡೇಟು
ಬೆಂಗಳೂರು: ಅಪಹರಣ ಹಾಗೂ ಡಬಲ್ ಮರ್ಡರ್ ಪ್ರಕರಣದ ಆರೋಪಿ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ, ಹೆಬ್ಬಗೋಡಿ ಪೊಲೀಸರು ಗುಂಡು ಹಾರಿಸಿ ಆರೋಪಿಯನ್ನು ವಶಕ್ಕೆ ಪಡೆದ ಘಟನೆ ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರೆ ಸ್ಮಶಾನದ ಬಳಿ ನಡೆದಿದೆ.
ಗುಂಡೇಟಿಗೆ ಒಳಗಾದ ಆರೋಪಿ ಆಂಧ್ರಪ್ರದೇಶ ಮೂಲದ ರವಿಪ್ರಸಾದ್ ರೆಡ್ಡಿ (ವಯಸ್ಸು ಸುಮಾರು 35), ಉದ್ಯಮಿ ಬಾಲಪ್ಪ ರೆಡ್ಡಿ ಮತ್ತು ಮಾದೇಶ ಅವರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನದಲ್ಲಿದ್ದ ಆರೋಪಿ ರವಿಪ್ರಸಾದ್ ರೆಡ್ಡಿಯನ್ನು ಸ್ಥಳ ಮಹಜರಿಗಾಗಿ ಕರೆದುಕೊಂಡು ಹೋಗಿದ್ದ ವೇಳೆ, ಆತ ಪೊಲೀಸರ ಮೇಲೆ ದಾಳಿ ನಡೆಸಿ ಹೆಡ್ ಕಾನ್ಸ್‌ಟೇಬಲ್‌ಗೆ ಗಾಯಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಇನ್ಸ್‌ಪೆಕ್ಟರ್ ಸೋಮಶೇಖರ್ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸೂಚಿಸಿದರು ಬಗ್ಗದ ಹಿನ್ನೆಲೆಯಲ್ಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಅವನನ್ನು ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡ ಆರೋಪಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
