ಹಣದಾಸೆಗೆ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ

ಹಣದಾಸೆಗೆ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ
Photo credit: TV09 (ಬಂಧಿತ ಆರೋಪಿಗಳು)

ಚಿಕ್ಕಮಗಳೂರು, ಜ. 7: ಹಣದಾಸೆಗೆ ಒಳಗಾಗಿ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಲಕಿ ನೀಡಿದ ದೂರಿನ ಮೇರೆಗೆ ಆಕೆಯ ತಂದೆ, ಅಜ್ಜಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಯಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತ ಬಾಲಕಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು, ಪಿಯುಸಿ ವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಳು. ಬಳಿಕ ತಂದೆಯ ಮನೆಗೆ ಮರಳಿದ್ದಳು. ಕಳೆದ ಡಿಸೆಂಬರ್‌ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ತೆರಳಿ ಎರಡು ದಿನ ಉಳಿದು ಬಂದಿದ್ದ ಬಾಲಕಿಗೆ ನಂತರ ಮತ್ತೆ ಅಜ್ಜಿಯಿಂದ ಕರೆ ಬಂದಿದೆ. ಆ ವೇಳೆ ಅಜ್ಜಿಯ ಮನೆಗೆ ಆಗಮಿಸಿದ್ದ ಭರತ್ ಶೆಟ್ಟಿ ಎಂಬಾತ ತಂದೆ–ಮಗಳೊಂದಿಗೆ ಪರಿಚಯ ಬೆಳೆಸಿಕೊಂಡು ಹಣದ ಆಮಿಷ ಒಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಿನಕ್ಕೆ ಐದು ಸಾವಿರ ರೂಪಾಯಿ ಸಿಗುತ್ತದೆ ಎಂಬ ಆಸೆಗೆ ತಂದೆ ಈ ಕೃತ್ಯಕ್ಕೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ತಂದೆ ಹಾಗೂ ಮಗಳು ಭರತ್ ಶೆಟ್ಟಿಯೊಂದಿಗೆ ಮಂಗಳೂರಿಗೆ ತೆರಳಿದ್ದು, ಅಲ್ಲಿ ಎರಡು ದಿನಗಳ ಅವಧಿಯಲ್ಲಿ 20ರಿಂದ 45 ವರ್ಷ ವಯಸ್ಸಿನ ನಾಲ್ವರು ವ್ಯಕ್ತಿಗಳು ಒಬ್ಬೊಬ್ಬರಂತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ತಾನು ಅಪ್ರಾಪ್ತೆ ಎಂದು ಎಷ್ಟೇ ಮನವಿ ಮಾಡಿಕೊಂಡರೂ, ‘ಹಣ ಕೊಟ್ಟಿದ್ದೇವೆ’ ಎಂದು ಹೇಳಿ ಆರೋಪಿಗಳು ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಮರುದಿನವೂ ಇದೇ ರೀತಿಯ ದೌರ್ಜನ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಾಲಕಿಯ ತಂದೆ, ಅಜ್ಜಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವೇಶ್ಯಾವಾಟಿಕೆ ದಂಧೆಯ ಕಿಂಗ್‌ಪಿನ್ ಎಂದು ಹೇಳಲಾಗುತ್ತಿರುವ ಭರತ್ ಶೆಟ್ಟಿ ಸೇರಿದಂತೆ 12 ಮಂದಿಯನ್ನು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ ಎಂಟಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.