ಹಾಸನ: ಆಷಾಡ ಮುಗಿಸಿ ಬಂದ ಹೆಂಡತಿ ವರದಕ್ಷಿಣೆ ತಂದಿಲ್ಲವೆಂದು ಮನಸೋಯಿಚ್ಛೆ ಹಲ್ಲೆ ನಡೆಸಿದ ಪತಿ

ಹಾಸನ: ಆಷಾಢಕ್ಕೆಂದು ತವರಿಗೆ ತೆರಳಿದ್ದ ಹೆಂಡತಿ ಹಣ ತರದೆ ಬರಿಗೈಯಲ್ಲಿ ಬಂದಿದ್ದಾಳೆಂದು ದೈಹಿಕ ಹಲ್ಲೆ ನಡೆಸಿ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಹೊಸೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶ್ರೀಮಂತ್ ಎಂಬಾತ ಪತ್ನಿ ಸುಷ್ಮಿತಾ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಾಳು ಮಹಿಳೆ ಹಾಸನದ ಹಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಸಂತೆ ಸಮೀಪದ ಶೆಟ್ಟಿಹಳ್ಳಿ ಗ್ರಾಮದ ಸುಷ್ಮಿತಾ ಹಾಗೂ ಶ್ರೀಮಂತ್ ಅವರ ಮದುವೆ ಆರು ತಿಂಗಳ ಹಿಂದೆ ನಡೆದಿದೆ. ಸುಷ್ಮಿತಾ ಅವರ ತವರು ಮನೆಯವರೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದಾರಾದರೂ ವರದಕ್ಷಿಣೆ ತರುವಂತೆ ಶ್ರೀಮಂತ್ ನಿತ್ಯ ಪೀಡಿಸುತ್ತಿದ್ದ. ಜಮೀನು ಕೆಲಸ ಮಾಡಿಕೊಂಡಿರುವ ಯುವಕ ಜೆಸಿಬಿ ಖರೀದಿಸಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದೇನೆ. ನನಗೆ ಓಡಾಡಲು ಕಾರು ಬೇಕು. ತವರು ಮನೆಯಿಂದ ವರದಕ್ಷಿಣೆ ತರಬೇಕೆಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಆಷಾಢ ಮುಗಿಸಿ ಹೆಂಡತಿ ಬರಿಗೈಯಲ್ಲಿ ಮನೆಗೆ ಬಂದಿದ್ದರಿಂದ ಆಕ್ರೋಶಗೊಂಡ ಆತ ಮನಬಂದಂತೆ ಥಳಿಸಿ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾನೆ. ಸುಷ್ಮಿತಾ ಅವರು ಹೇಗೋ ಆತನಿಂದ ಬಚಾವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.