ಹಾಸನ: ಪತಿ–ಅತ್ತೆಯ ಕಿರುಕುಳ ತಾಳಲಾರದೆ ತಾಯಿ–ಮಗಳ ದಾರುಣ ಅಂತ್ಯ ಸೆಲ್ಫಿ ವೀಡಿಯೋ, ಡೆತ್ ನೋಟ್ ಬರೆದು ಕಾವೇರಿ ನದಿಗೆ ಹಾರಿ ಆತ್ಮಹತ್ಯೆ
ಅರಕಲಗೂಡು: ಪತಿ ಮತ್ತು ಅತ್ತೆ ನೀಡುತ್ತಿದ್ದ ಕೌಟುಂಬಿಕ ಕಿರುಕುಳವನ್ನು ತಾಳಲಾರದೆ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಅರಕಲಗೂಡು ತಾಲ್ಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ನಡೆದಿದೆ. ಸೆಲ್ಫಿ ವೀಡಿಯೋ ದಾಖಲಿಸಿ, ಡೆತ್ ನೋಟ್ ಬರೆದಿರುವ ಈ ಪ್ರಕರಣ ಕೊಣನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸಾಲಿಗ್ರಾಮದ ಮಹಾದೇವಿ (29) ಅವರು ಮೂರು ವರ್ಷಗಳ ಹಿಂದೆ ಸೀಬಳ್ಳಿ ಗ್ರಾಮದ ಕುಮಾರ್ ಅವರೊಂದಿಗೆ ವಿವಾಹವಾಗಿದ್ದರು. ವಿವಾಹವಾದ ನಂತರದಿಂದಲೇ ಪತಿ ಅನುಮಾನಪಟ್ಟು ಅವಾಚ್ಯ ಶಬ್ದಗಳಿಂದ ನಿಂದನೆ, ದೈಹಿಕ–ಮಾನಸಿಕ ಕಿರುಕುಳ ನೀಡುತ್ತಿದ್ದಾನೆಂದು ಕುಟುಂಬಸ್ಥರು ತಿಳಿಸಿದ್ದಾರೆ. ತವರು ಮನೆ ಸೇರಿದ ಬಳಿಕವೂ ಫೋನ್ ಮತ್ತು ಮೆಸೇಜ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ ಹಿಂಸೆ ಮುಂದುವರಿಸಿದ್ದಾನೆಂದು ಮೂಲಗಳು ತಿಳಿಸಿವೆ.
ನವೆಂಬರ್ 14ರಂದು ದೂರು ನೀಡಲು ಮನೆಯಿಂದ ಹೊರಟಿದ್ದ ಮಹಾದೇವಿ ನಂತರ ಸೆಲ್ಫಿ ವೀಡಿಯೋವೊಂದನ್ನು ದಾಖಲಿಸಿದ್ದಾರೆ. ಅದರಲ್ಲಿ “ನನ್ನ ಪತಿ–ಅತ್ತೆಯೇ ನನ್ನ ಸಾವಿಗೆ ಕಾರಣ. ನನ್ನ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ಬದುಕಲಿ?” ಎಂದು ಅಳಲು ಹೊರಹಾಕಿದ್ದಾರೆ. ನಂತರ ಡೆತ್ ನೋಟ್ ಬರೆದಿಟ್ಟು ಮಗಳೊಂದಿಗೆ ಕಾವೇರಿ ನದಿಗೆ ಹಾರಿದ್ದಾರೆ.
ಮಹಾದೇವಿ ದೂರು ನೀಡಲು ಹೋದಾಗ ಪೊಲೀಸರು ಹೆದರಿಸಿ ಹಿಂದಕ್ಕೆ ಕಳುಹಿಸಿದ್ದರು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೆ ಅಕ್ಕ ಇಂದು ಬದುಕಿರುತ್ತಿದ್ದಳು” ಎಂದು ಕುಟುಂಬದವರು ದೂರಿದ್ದಾರೆ.
ಬೆಟ್ಟಸೋಗೆ ಹತ್ತಿರದ ಕಾವೇರಿ ನದಿಯಲ್ಲಿ ಮಹಾದೇವಿಯ ಶವ ಪತ್ತೆಯಾಗಿದೆ. ಮಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಪತಿ ಕುಮಾರ್ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
