ಹನಿಟ್ರ್ಯಾಪ್ ಜಾಲ:ಮಹಿಳೆ ಸಹಿತ ಆರು ಮಂದಿ ಅರೆಸ್ಟ್

ಉಡುಪಿ: ಹನಿಟ್ರ್ಯಾಪ್ ಜಾಲದ ತಂಡವೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ಆರೋಪದಲ್ಲಿ ಕುಂದಾಪುರ ಪೊಲೀಸರು ಮಹಿಳೆ ಸಹಿತ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ನಾವುಂದ ಬಡಾಕೆರೆಯ ಸವಾದ್ ಯಾನೆ ಅಚ್ಚು (28), ಗುಲ್ತಾಡಿ ಗಾಂಧಿಕಟ್ಟೆಯ ಸೈಫುಲ್ಲಾ (38), ಹಂಗಳೂರು ಗ್ರಾಮದ ಮುಹಮ್ಮದ್ ನಾಸಿರ್ ಶರೀಫ್ (36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲನಿಯ ಅಬ್ದುಲ್ ಸತ್ತಾರ್ (23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್ (26), ಕುಂದಾಪುರ ಎಂ.ಕೋಡಿಯ ಅಸ್ಮಾ (43) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ ಒಟ್ಟು 18,00,000 ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಕೋಟೇಶ್ವರ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪ್ರಕರಣದ ವಿವರ:
ಸಂದೀಪ್ ಕುಮಾರ್ ಸುಮಾರು ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಸವಾದ್‌ನ ಪರಿಚಯವಾಗಿದ್ದು, ಮುಂದೆ ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚಯ ಕೂಡ ಆಗಿತ್ತು. ಇದೇ ವೇಳೆ ಸವಾದ್, ಅಸ್ಮ ಎಂಬಾಕೆಯನ್ನು ಪರಿಚಯ ಮಾಡಿಕೊಟ್ಟು ಮೊಬೈಲ್ ನಂಬರ್ ಕೊಟ್ಟಿದ್ದನೆನ್ನಲಾಗಿದೆ. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿದ ಸಂದೀಪ್ ಕರೆ ಮಾಡಿದ್ದು, ಅದರಂತೆ ಆಕೆ ಕುಂದಾಪುರಕ್ಕೆ ಬರಲು ತಿಳಿಸಿದ್ದಳು. ಸಂದೀಪ್ ಸೆ.2ರಂದು ಸಂಜೆ 6:30ಕ್ಕೆ ಕುಂದಾಪುರದ ಮಲ್ನಾಡ್ ಪೆಟ್ರೋಲ್ ಬಂಕ್ ಬಳಿಯ ಆರ್‌ಆರ್ ಪ್ಲಾಝಾ ಬಳಿ ಹೋಗಿದ್ದು ಅಲ್ಲಿಂದ ಅಣ್ಣಾ ಮನೆಗೆ ಕರೆದುಕೊಂಡು ಹೋಗಿದ್ದಳೆನ್ನಲಾಗಿದೆ. ಬಳಿಕ ಅಸ್ಮಾ ಉಳಿದ ಆರೋಪಿಗಳನ್ನು ಕರೆ ಮಾಡಿ ಕರೆಯಿಸಿ ಸಂದೀಪ್ ಬಳಿ 3 ಲಕ್ಷ ರೂ. ನೀಡುವಂತೆ ಚಾಕು ತೋರಿಸಿ ಬೆದರಿಸಿದರು. ಈ ವೇಳೆ ಸಂದೀಪ್ ಅಲ್ಲಿಂದ ಹೆದರಿ ಓಡಿ ಹೋಗಲು ಪ್ರಯತ್ನಿಸಿದರು. ಆಗ ಆರೋಪಿಗಳು ಸೇರಿ ಸಂದೀಪ್‌ರನ್ನು ಕಟ್ಟಿ ಹಾಕಿ ಹಲ್ಲೆ ಮಾಡಿದರೆನ್ನಲಾಗಿದೆ. ಅಲ್ಲದೇ ರಾಡ್ ನಿಂದ ಹೊಡೆದು ಬಳಿಕ ಅವರ ಪ್ಯಾಂಟ್ ಜೇಬಿನಲ್ಲಿದ್ದ 6,200 ರೂ. ಗಳನ್ನು ಬಲವಂತದಿಂದ ಕಸಿದುಕೊಂಡರು ಎಂದು ದೂರಲಾಗಿದೆ.
ಬಳಿಕ ಅಸ್ಮಾ, ಸಂದೀಪ್ ಗೆ ಗೂಗಲ್ ಪೇ ಮೂಲಕ ಹಣ ಹಾಕಲು ಒತ್ತಾಯಿಸಿದ್ದು, ಅದರಂತೆ ಗೂಗಲ್ ಪೇ ಮೂಲಕ ಸೈಪುಲ್ಲಾನ ಖಾತೆಗೆ 5,000 ರೂ. ವರ್ಗಾವಣೆ ಮಾಡಿದ್ದರು. ಆರೋಪಿಗಳು ಇನ್ನೂ ಹೆಚ್ಚಿನ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿ ಹಲ್ಲೆ ಮಾಡಿದರು. ಇದಕ್ಕೆ ಹೆದರಿದ ಸಂದೀಪ್, ಸೈಪುಲ್ಲಾನ ಖಾತೆಗೆ 30 ಸಾವಿರ ರೂ. ವರ್ಗಾವಣೆ ಮಾಡಿದರು ಎನ್ನಲಾಗಿದೆ. ನಂತರ ಮತ್ತೆ ಬಲತ್ಕಾರವಾಗಿ ಎಟಿಎಂ ಕಾರ್ಡ್ ನ್ನು ಕಿತ್ತುಕೊಂಡು ಪಿನ್ ನಂಬರ್ ಪಡೆದುಕೊಂಡು, ಸಂದೀಪ್‌ರನ್ನು ಅಸ್ಥಾಳ ಮನೆಯ ಕೋಣೆಯಲ್ಲಿ ಕೂಡಿಹಾಕಿದರು. ಬಳಿಕ ಕಾರ್ಡ್ ಮೂಲಕ ಸಂದೀಪ್ ಬ್ಯಾಂಕ್ ಖಾತೆಯಿಂದ 40,000 ರೂ. ಗಳನ್ನು ಡ್ರಾ ಮಾಡಿಕೊಂಡರೆಂದು ದೂರಲಾಗಿದೆ. ರಾತ್ರಿ 11:30ಕ್ಕೆ ಸಂದೀಪ್‌ರನ್ನು ಅಲ್ಲಿಂದ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂದೀಪ್ ಕುಮಾರ್ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.