ಪತಿ ಶಾಸಕ, ಪತ್ನಿ ಅಂಗನವಾಡಿ ಟೀಚರ್!

ಪತಿ ಶಾಸಕ, ಪತ್ನಿ ಅಂಗನವಾಡಿ ಟೀಚರ್!
Photo credit: Etv bharath

ಬೆಳಗಾವಿ, ಡಿ.6: ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಠಲ ಹಲಗೇಕರ್ ಹಾಗೂ ಅವರ ಪತ್ನಿ ರುಕ್ಮಿಣಿ ಹಲಗೇಕರ್ ದಂಪತಿಯ ಸರಳ ಜೀವನ ಎಲ್ಲರಿಗೂ ಮಾದರಿಯಾಗಿದೆ. ಪತಿ ಶಾಸಕನಾದರೂ ರುಕ್ಮಿಣಿ ಅವರು ತಮ್ಮ ಹಳೆಯ ವೃತ್ತಿಯಾದ ಅಂಗನವಾಡಿ ಶಿಕ್ಷಕಿಯಾಗಿ ದಿನನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತೋಪಿನಕಟ್ಟಿ ಗ್ರಾಮದ ಅಂಗನವಾಡಿ ಕೇಂದ್ರ ನಂ.149ರಲ್ಲಿ ಕಳೆದ ಏಳು ವರ್ಷಗಳಿಂದ ರುಕ್ಮಿಣಿ ಹಲಗೇಕರ್ ಸೇವೆ ಸಲ್ಲಿಸುತ್ತಿದ್ದಾರೆ. 1992ರಿಂದ ಬಾಲವಾಡಿ ಮತ್ತು ಅಂಗನವಾಡಿ ಸೇರಿ 33 ವರ್ಷಗಳಿಂದ ಶಾಲಾಪೂರ್ವ ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದಾರೆ.

“ಪತಿ ಶಾಸಕನಾದರೂ ನಾನು ಕೆಲಸ ಬಿಟ್ಟಿಲ್ಲ. ಮಕ್ಕಳಿಗೆ ಆಟ–ಪಾಠ ನಡೆಸುವುದು, ಪೌಷ್ಟಿಕಾಹಾರ ವಿತರಣೆಯಿಂದ ಹಿಡಿದು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ನನ್ನ ಜವಾಬ್ದಾರಿ. ನಮಗೆ ಮಕ್ಕಳಿಲ್ಲ; ಅಂಗನವಾಡಿ ಮಕ್ಕಳಲ್ಲಿ ನಮ್ಮ ಮಕ್ಕಳನ್ನು ಕಾಣುತ್ತೇವೆ” ಎನ್ನುತ್ತಾರೆ ರುಕ್ಮಿಣಿ ಹಲಗೇಕರ್.

ಕಿಡ್ನಿ ವೈಫಲ್ಯಕ್ಕೆ ಒಳಗಾದ ಪತಿ ವಿಠಲ ಹಲಗೇಕರ್ ಅವರಿಗೆ ಕೆಲವು ವರ್ಷಗಳ ಹಿಂದೆ ರುಕ್ಮಿಣಿ ತಮ್ಮ ಒಂದು ಕಿಡ್ನಿಯನ್ನು ದಾನ ನೀಡಿ ಜೀವ ಉಳಿಸಿದ್ದರು.“ನನ್ನ ಹೆಂಡತಿ ನನಗೆ ಪುನರ್ಜನ್ಮ ನೀಡಿದ್ದಾಳೆ. ಅಧಿಕಾರ ಶಾಶ್ವತವಲ್ಲ; ಜನಪರ ಕೆಲಸ ಮಾತ್ರ ಉಳಿಯುತ್ತದೆ” ಎಂದು ಹಲಗೇಕರ್ ಪ್ರತಿಕ್ರಿಯಿಸಿದರು.

ವಿಠಲ–ರುಕ್ಮಿಣಿ ದಂಪತಿಗೆ ಮಕ್ಕಳಿಲ್ಲದಿದ್ದರೂ, ತಮ್ಮ ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುವ ಮೂಲಕ ಸೇವೆಯಲ್ಲಿ ಸಂತೃಪ್ತಿಯನ್ನು ಹುಡುಕಿಕೊಂಡಿದ್ದಾರೆ.

ಅಂಗನವಾಡಿ ಶಿಕ್ಷಕಿ ಜ್ಯೋತಿ ಬಾಚೋಳ್ಕರ್, “ರುಕ್ಮಿಣಿ ಅವರು ಶಾಸಕರ ಪತ್ನಿ ಎನ್ನುವ ಹೆಮ್ಮೆ–ಹಮ್ಮು ಇಲ್ಲದೆ ಸರಳವಾಗಿ ಕೆಲಸ ಮಾಡುತ್ತಾರೆ” ಎಂದರು.

ಗ್ರಾಮಪಂಚಾಯತ್ ಸದಸ್ಯ ಲಕ್ಷ್ಮಣ ತಿರವೀರ, “ಮಕ್ಕಳಿಗೆ ತಾಯಿಯಂತೆ ಲಾಲನೆ–ಪೋಷಣೆ ನೀಡುವ ಶಿಕ್ಷಕಿ ಅವರು. ಸರ್ಕಾರದ ಯೋಜನೆಗಳನ್ನು ನಿಷ್ಠೆಯಿಂದ ಜಾರಿಗೆ ತರುತ್ತಿದ್ದಾರೆ” ಎಂದು ಮೆಚ್ಚುಗೆ ಸೂಚಿಸಿದರು.

ಬಿ.ಎಸ್‌ಸಿ, ಬಿ.ಎಡ್ ಪದವಿ ಪಡೆದ ಹಲಗೇಕರ್ ಗರ್ಲಗುಂಜಿಯ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದು, 2023ರ ಜನವರಿಯಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಶಾಸಕರಾದರು.