ಗಂಡು ಮಗುವಿನ ಆಸೆಗೆ ಮಾಟಗಾತಿಯ ಮಾತು ನಂಬಿದ ಪತಿ: ಹೆಂಡತಿಯ ತಲೆಯ ಕೂದಲೇ ಕತ್ತರಿಸಿದ ಅಮಾನವೀಯ ಕೃತ್ಯ
ವಿಜಯಪುರ, ಡಿ. 08: ಗಂಡು ಮಗು ಬೇಕೆಂಬ ಆಸೆಗೂ, ಮಾಟ-ಮಂತ್ರದ ನಂಬಿಕೆಗೆ ತಲೆಬಾಗಿದ ಪತಿಯೋರ್ವ ಹೆಂಡತಿಯ ತಲೆಯ ಮಧ್ಯಭಾಗದ ಕೂದಲನ್ನೇ ಬಲವಂತವಾಗಿ ಕತ್ತರಿಸಿದ ಘಟನೆ ವಿಜಯಪುರ ಜಿಲ್ಲಾ ಹೊನ್ನುಟಗಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯ ದೂರು ಆಧರಿಸಿ ಪತಿ, ಅತ್ತೆ-ಮಾವ ಮತ್ತು ಮಾಟಗಾತಿಯ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜ್ಯೋತಿ ದಳವಾಯಿ (ಸಂತ್ರಸ್ತೆ) ಮತ್ತು ಡುಂಡೇಶ್ ದಂಪತಿ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳು ಜನಿಸಿದ್ದು, ಗಂಡು ಮಗು ಬೇಕೆಂಬ ಒತ್ತಡ ಜ್ಯೋತಿಯ ಮೇಲೆ ನಿರಂತರವಾಗಿ ಹೆಚ್ಚುತ್ತಿದ್ದಂತೆ, ಅತ್ತೆ-ಮಾವರ ಜೊತೆಗೂಡಿ ಪತಿಯು ಆಕೆಗೆ ದೈಹಿಕ-ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂಬುದು ದೂರಿನಲ್ಲಿ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ದುಂಡೇಶ್ ಕುಟುಂಬ ಕೊಲ್ಹಾರ ತಾಲೂಕಿನ ಮುಳಗಾಡಕ್ಕೆ ಸೇರಿರುವ ಮಂಗಳಾ ಎಂಬ ಮಾಟಗಾತಿಯ ಮೊರೆ ಹೋಗಿದೆ. ಗಂಡು ಮಗು ಆಗದಿರುವ ಬೇಸರ ಹಂಚಿಕೊಂಡಾಗ, “ಪತ್ನಿಯ ಮೈಯಲ್ಲಿ ದೆವ್ವವಿದೆ. ಅದನ್ನು ಬಿಡಿಸಲು ಆಕೆಯ ನೆತ್ತಿಯ ಬಳಿ ರಕ್ತ ಕಾಣುವಂತೆ ಕೂದಲು ಕತ್ತರಿಸಬೇಕು” ಎಂದು ಮಂಗಳಾ ಹೇಳಿದ್ದಾಳೆ ಎಂದು ಆರೋಪ.
ಮಾಟಗಾತಿಯ ಸಲಹೆಯನ್ನು ನಂಬಿದ ಪತಿ, ಮನೆಗೆ ಬಂದೊಡನೆ ಜ್ಯೋತಿಯ ಮೇಲೆ ಹಲ್ಲೆ ನಡೆಸಿ, ಬ್ಲೇಡ್ ಬಳಸಿ ತಲೆಯ ಮಧ್ಯ ಭಾಗದ ಕೂದಲನ್ನು ಬಲವಂತವಾಗಿ ಕತ್ತರಿಸಿದ್ದಾನೆ. ಬಳಿಕ ಕತ್ತರಿಸಿದ ಕೂದಲನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಸುಟ್ಟಿರುವುದು ಬೆಳಕಿಗೆ ಬಂದಿದೆ.
ಘಟನೆಯ ಬಳಿಕ ತೀವ್ರ ರಕ್ತಸ್ರಾವದಿಂದ ಬಳಲಿದ ಜ್ಯೋತಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ನಂತರ ತವರು ಮನೆಗೆ ತೆರಳಿದ್ದಾರೆ. ಘಟನೆ ನಡೆದಿದ್ದು 12 ದಿನಗಳ ಹಿಂದಾದರೂ, ಡಿಸೆಂಬರ್ 1ರಂದು ಜ್ಯೋತಿ ಹಾಗೂ ಆಕೆಯ ಕುಟುಂಬಸ್ಥರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
