ಕೆಜಿಎಫ್: ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ: ಸಿಸಿಟಿವಿಯಲ್ಲಿ ಸೆರೆ
ಕೆಜಿಎಫ್: ನಗರದ ಊರಿಗಾಂ ಪೇಟೆ ಸಮೀಪದ ಬಾಲಕೃಷ್ಣ ಬಡಾವಣೆಯಲ್ಲಿ ಭಾನುವಾರ ಸಂಜೆ ನಡೆದ ದುರ್ಘಟನೆಯಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಬೀದಿ ನಾಯಿಗಳ ದಾಳಿಗೆ ಗುರಿಯಾಗಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮನೆಯ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಬಾಲಕ ಅಲೆಕ್ಸ್ ಮೇಲೆ ಬೀದಿ ನಾಯಿಗಳ ಗುಂಪು ಎರಗಿದ್ದು, ಕಚ್ಚಿ ಎಳೆದಾಡಿದೆ. ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಬಾಲಕನ ತೊಡೆ ಹಾಗೂ ಕಾಲು ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಬಾಲಕನನ್ನು ರಕ್ಷಿಸಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲೆಕ್ಸ್‌ನ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗಾಯಾಳು ಬಾಲಕನ ಪೋಷಕರು ಅಸ್ಸಾಂ ಮೂಲದವರಾಗಿದ್ದು, ನಗರದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರು ಬೀದಿ ನಾಯಿಗಳ ಹೆಚ್ಚುತ್ತಿರುವ ಸಮಸ್ಯೆಯನ್ನು ಉಲ್ಲೇಖಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.