ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ–ಮಗು ಮೃತ್ಯು
ಬೆಂಗಳೂರು: ನಗರದ ಗೋವಿಂದರಾಜನಗರದ ಪಂಚಶೀಲನಗರದಲ್ಲಿ ಬಾತ್‌ರೂಮ್ ನ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾದ ತಾಯಿ–ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ನಡೆದಿದೆ.
ಪಂಚಶೀಲನಗರದ ನಿವಾಸಿ ಚಾಂದಿನಿ (26) ಹಾಗೂ ಅವರ ನಾಲ್ಕು ವರ್ಷದ ಮಗು ಯುವಿ ಮಧ್ಯಾಹ್ನ ಸ್ನಾನಕ್ಕೆಂದು ಬಾತ್‌ರೂಮ್‌ಗೆ ಹೋಗಿದ್ದ ವೇಳೆ ಗೀಸರ್‌ನಿಂದ ಸೋರಿಕೆಯಾಗಿದ್ದ ಗ್ಯಾಸ್ ಸೇವಿಸಿದ್ದರು. ಅಸ್ವಸ್ಥಗೊಂಡ ಇಬ್ಬರನ್ನು ಅಕ್ಕಪಕ್ಕದವರು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೋವಿಂದರಾಜನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
