ತಾನೇ ಹೆತ್ತ ಮಗುವನ್ನೇ ಕೊಂದ ತಾಯಿ! | ಕಾರಣ ಕೇಳಿದ್ರೆ ನೀವೇ ಶಾಕ್!!

ತಾನೇ ಹೆತ್ತ ಮಗುವನ್ನೇ ಕೊಂದ ತಾಯಿ! | ಕಾರಣ ಕೇಳಿದ್ರೆ ನೀವೇ ಶಾಕ್!!
Photo credit: TV09

ಆನೇಕಲ್, ನ.8 – ಲೆಸ್ಬಿಯನ್ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ತಾಯಿಯೇ ತನ್ನ ಐದು ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊಂದಿರುವ ಅಮಾನವೀಯ ಘಟನೆ ಆನೇಕಲ್ ಗಡಿಭಾಗದ ತಮಿಳುನಾಡಿನ ಕೆಳಮಂಗಲಂ ವ್ಯಾಪ್ತಿಯ ಚಿನ್ನಟ್ಟಿ ಗ್ರಾಮದಲ್ಲಿ ನಡೆದಿದೆ.

ಆರೋಪಿ ತಾಯಿಯನ್ನು ಭಾರತಿ (26) ಹಾಗೂ ಆಕೆಯ ಲೆಸ್ಬಿಯನ್ ಸಂಗಾತಿ ಸುಮಿತ್ರಾ (22) ಎಂದು ಗುರುತಿಸಲಾಗಿದೆ. ಕೆಳಮಂಗಲಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಿನ್ನಟ್ಟಿಯ ಸುರೇಶ್ ಮತ್ತು ಭಾರತಿ ಮದುವೆಯಾಗಿ ಐದು ವರ್ಷಗಳಾಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿನ ತಾಯಿಯಾದ ಭಾರತಿ, ಅದೇ ಗ್ರಾಮದ ಯುವತಿ ಸುಮಿತ್ರಾಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು. ಕಾಲಕ್ರಮೇಣ ಆ ಸ್ನೇಹ ಲೆಸ್ಬಿಯನ್ ಸಂಬಂಧಕ್ಕೆ ತಿರುಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಇಬ್ಬರೂ ಆಪ್ತ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರೂ ಪರಸ್ಪರ ನಗ್ನ ವಿಡಿಯೋ ಕಾಲ್‌ಗಳು, ಖಾಸಗಿ ಫೋಟೋ ವಿನಿಮಯಕ್ಕಾಗಿ ಪ್ರತ್ಯೇಕ ಮೊಬೈಲ್ ಇಟ್ಟುಕೊಂಡಿದ್ದರು. ಭಾರತಿ ತನ್ನ ಎದೆ ಮೇಲೆ ‘ಸುಮಿ’ (Sumi) ಎಂಬ ಟ್ಯಾಟೂ ಹಾಕಿಸಿಕೊಂಡಿದ್ದಳು. ಕೈಯಲ್ಲಿ ಪರಸ್ಪರ ರಕ್ತದ ಗುರುತು ಮಾಡಿಕೊಂಡು, ರೀಲ್ಸ್ ಹಾಗೂ ಚಿತ್ರಗಳನ್ನು ಶೂಟ್ ಮಾಡುತ್ತಿದ್ದರು ಎಂಬ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ.

ಐದು ತಿಂಗಳ ಹಿಂದೆ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಸುಮಿತ್ರಾಳಿಗೆ ಆಕೆ ದೂರವಾಗುತ್ತಿದ್ದಾಳೆ ಎಂಬ ಅನುಮಾನ ಹುಟ್ಟಿತ್ತು. ಈ ಕಾರಣದಿಂದ ಇಬ್ಬರ ನಡುವೆ ಪದೇಪದೇ ಜಗಳ ನಡೆದಿತ್ತು. ಮಗುವೇ ಇವರ ಸಂಬಂಧಕ್ಕೆ ಅಡ್ಡಿಯಾಗಿದೆ ಎಂದು ಭಾವಿಸಿದ ಸುಮಿತ್ರಾ, ಮಗುವನ್ನು ಕೊಲ್ಲಲು ಪ್ರಚೋದಿಸಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಸಂಗಾತಿಯ ಪ್ರೇರಣೆಯಿಂದ ಭಾರತಿ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಿ, “ಹಾಲು ಕುಡಿಯುವಾಗ ಗಂಟಲಲ್ಲಿ ಸಿಕ್ಕಿ ಸತ್ತುಹೋಯಿತು” ಎಂದು ಕುಟುಂಬಸ್ಥರಲ್ಲಿ ನಾಟಕವಾಡಿದ್ದಳು. ಬಳಿಕ ಮಗುವಿನ ಅಂತ್ಯಕ್ರಿಯೆ ನೆರವೇರಿಸಲಾಯಿತು.

ನಂತರ ಭಾರತಿ ಬಳಸುತ್ತಿದ್ದ ಮೊಬೈಲ್ ಪತಿ ಸುರೇಶ್‌ಗೆ ಸಿಕ್ಕಿದ್ದು, ಅದರಲ್ಲಿ ಇಬ್ಬರ ಆಪ್ತ ಚಿತ್ರಗಳು, ವೀಡಿಯೋಗಳು ಹಾಗೂ ಸಂಭಾಷಣೆಗಳು ಪತ್ತೆಯಾಗಿವೆ. ಇದರಿಂದ ಮಗುವಿನ ಸಾವಿನ ನಿಜ ಕಾರಣ ಬಯಲಾಗಿದ್ದು, ಸುರೇಶ್ ಪೊಲೀಸರಿಗೆ ದೂರು ನೀಡಿದ್ದಾರೆ.  

ಕೆಳಮಂಗಲಂ ತಹಶೀಲ್ದಾರ್ ಗಂಗೈ ಅವರ ಸಮ್ಮುಖದಲ್ಲಿ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ..