ಹತ್ಯೆಯಾದವನ ಹುಟ್ಟುಹಬ್ಬದ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ

ಹತ್ಯೆಯಾದವನ ಹುಟ್ಟುಹಬ್ಬದ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ
Photo credit: TV09 (ಫೋಟೋ:ಜೀವಾವಧಿ ಶಿಕ್ಷೆಗೆ ಗುರಿಯಾದವರು)

ಬೆಂಗಳೂರು, ನ. 4: ಪಾಟ್ನಾ ಮೂಲದ ಸಿದ್ದಾರ್ಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಹೆಚ್ 59ನೇ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಕೊಲೆಯಾದ ಸಿದ್ದಾರ್ಥ್ ಹುಟ್ಟುಹಬ್ಬದ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ಅಪರೂಪದ ಘಟನೆ ದಾಖಲಿಸಿದೆ.

2018ರ ಜೂನ್ 26ರಂದು ನಡೆದಿದ್ದ ಈ ಘಟನೆಗೆ ಪಾಟ್ನಾ ಮೂಲದ ಸಿದ್ದಾರ್ಥ್ ಜೀವ ಬಲಿಯಾದರು. ಆ ರಾತ್ರಿ ಸಿದ್ದಾರ್ಥ್ ತಮ್ಮ ಸ್ನೇಹಿತರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಮಧ್ಯರಾತ್ರಿ 2.45ರ ಸುಮಾರಿಗೆ ಮೂತ್ರ ವಿಸರ್ಜನೆಗಾಗಿ ಕಾರು ನಿಲ್ಲಿಸಿದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಮಾತಿನ ಚಕಮಕಿ ಉಂಟಾಗಿ, ಆರೋಪಿಗಳಾದ ಗಿರೀಶ್ ಹಾಗೂ ಮಹೇಶ್ ದೊಣ್ಣೆಯಿಂದ ಸಿದ್ದಾರ್ಥ್ ಮೇಲೆ ದಾಳಿ ನಡೆಸಿದರು. ಗಂಭೀರವಾಗಿ ಗಾಯಗೊಂಡ ಸಿದ್ದಾರ್ಥ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸದೆ ಜೂನ್ 28ರಂದು ಅವರು ಮೃತಪಟ್ಟರು.

ಘಟನೆಯ ಬಳಿಕ ಮೈಕೋಲೇಔಟ್ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಕೊಲೆಯಾದ ಸಿದ್ದಾರ್ಥ್ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 24ರಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಮೃತನ ತಂದೆಗೆ 10 ಸಾವಿರ ರೂ. ಪರಿಹಾರ ಪಾವತಿಸಲು ಆದೇಶಿಸಿದೆ.

ಮಗನ ಸಾವಿಗೆ ನ್ಯಾಯ ಸಿಕ್ಕಿದೆ”

ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದಾರ್ಥ್ ತಂದೆ ಕೌಶಲೇಂದ್ರ ಅವರು, “ಮಗನ ಸಾವಿಗೆ ಈಗ ನ್ಯಾಯ ಸಿಕ್ಕಂತಾಗಿದೆ. ನಮ್ಮ ನೋವಿಗೆ ಕಾನೂನು ಉತ್ತರ ನೀಡಿದೆ,” ಎಂದು ಹೇಳಿದರು.