ಮೈಸೂರು | ಮತ್ತೆ ಹುಲಿ ಅಟ್ಟಹಾಸಕ್ಕೆ ರೈತ ಬಲಿ
ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಹುಲಿ ದಾಳಿ ಮತ್ತೊಮ್ಮೆ ಜೀವ ತೆಗೆದಿದೆ. ಜಮೀನಿಗೆ ತೆರಳುತ್ತಿದ್ದ ದಂಡನಾಯ್ಕ ಅಲಿಯಾಸ್ ಸ್ವಾಮಿ (58) ಅವರ ಮೇಲೆ ಹುಲಿ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಕೆಲವೇ ತಿಂಗಳ ಹಿಂದೆ ಇದೇ ರೈತ ದಂಡನಾಯ್ಕ ಅವರ ಮೇಲೆ ಆನೆ ದಾಳಿ ನಡೆದಿತ್ತು. ಆಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಈ ಬಾರಿ ಹುಲಿ ದಾಳಿಗೆ ಬಲಿಯಾಗಿ ಮೃತಪಟ್ಟಿದ್ದಾರೆ.
ಪದೇಪದೇ ನಡೆಯುತ್ತಿರುವ ಹುಲಿ ದಾಳಿಗಳಿಂದ ಕಾಡಂಚಿನ ಗ್ರಾಮಗಳ ನಿವಾಸಿಗಳು ಭಯಭೀತರಾಗಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಜಮೀನಿಗೆ ಹೋಗಲು, ಕಾಡು ದಾಟಲು ಸಹ ರೈತರು ಹೆದರುತ್ತಿದ್ದಾರೆ. ಕಳೆದ ಕೆಲವು ತಿಂಗಳಲ್ಲಿ ಹುಲಿ ದಾಳಿಯಿಂದ ಹಲವು ರೈತರು ಹಾಗೂ ಪಶುಗಳು ಬಲಿಯಾಗಿರುವ ಘಟನೆಗಳೂ ದಾಖಲಾಗಿವೆ.
ಇತ್ತೀಚೆಗಷ್ಟೇ ನಂಜನಗೂಡು ತಾಲೂಕಿನ ನೇರಳೆ ಗ್ರಾಮದಲ್ಲಿ ದನ ಕಾಯುತ್ತಿದ್ದ ರೈತನ ಬಳಿಯೇ ಹುಲಿ ಬಂದ ಘಟನೆ ನಡೆದಿತ್ತು. ಮಾನವರಷ್ಟೇ ಅಲ್ಲದೆ ಜಾನುವಾರುಗಳ ಮೇಲೂ ಹುಲಿಗಳ ದಾಳಿ ಹೆಚ್ಚಾಗಿದ್ದು, ಕೊಟ್ಟಿಗೆಯೊಳಗೂ ನುಗ್ಗಿ ದಾಳಿ ನಡೆಸುತ್ತಿರುವುದು ಗ್ರಾಮಸ್ಥರನ್ನು ಕಂಗಾಲಾಗಿಸಿದೆ.
ಇತ್ತೀಚಿಗಷ್ಟೇ ನಂಜನಗೂಡು ತಾಲೂಕಿನ ಉಪ್ಪನಹಳ್ಳಿಯಲ್ಲಿ ರೈತ ಸಣ್ಣಮಾದಯ್ಯ ಅವರ ಕೊಟ್ಟಿಗೆಯೊಳಗೆ ನುಗ್ಗಿದ ಹುಲಿ ಮೇಕೆಯನ್ನು ಕೊಂದು ತಿಂದಿತ್ತು.
ಹುಲಿ ದಾಳಿಗಳು ನಿರಂತರವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿಗಳನ್ನು ಪತ್ತೆಹಚ್ಚಿ ಬೇರೆಡೆ ಸ್ಥಳಾಂತರಿಸುವುದು ಹಾಗೂ ಗ್ರಾಮಸ್ಥರ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ.
