ಪೋಕ್ಸೋ ಪ್ರಕರಣ | ಮುರುಘಾ ಶರಣರನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಂತ್ರಸ್ತ ಬಾಲಕಿಯರಿಂದ ಹೈಕೋರ್ಟ್ ಗೆ ಮೇಲ್ಮನವಿ

ಪೋಕ್ಸೋ ಪ್ರಕರಣ | ಮುರುಘಾ ಶರಣರನ್ನು ಖುಲಾಸೆಗೊಳಿಸಿದ್ದನ್ನು  ಪ್ರಶ್ನಿಸಿ ಸಂತ್ರಸ್ತ ಬಾಲಕಿಯರಿಂದ ಹೈಕೋರ್ಟ್ ಗೆ ಮೇಲ್ಮನವಿ
ಹೈಕೋರ್ಟ್

ಬೆಂಗಳೂರು, ಡಿ. 10: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮೂವರು ಆರೋಪಿಗಳಿಗೆ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ್ದ ಆದೇಶವನ್ನು ಪ್ರಶ್ನಿಸಿ, ಸಂತ್ರಸ್ತ ಬಾಲಕಿಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಬುಧವಾರ ದಾಖಲಾಗಿರುವ ಮೇಲ್ಮನವಿಯಲ್ಲಿ, ಪ್ರಕರಣವನ್ನು ತನಿಖೆ ಮಾಡಿದ ಚಿತ್ರದುರ್ಗ ಗ್ರಾಮೀಣ ಪೊಲೀಸ್ ಠಾಣೆಯನ್ನೂ, ಖುಲಾಸೆಗೊಂಡಿರುವ ಮುರುಘಾ ಶರಣರು, ವಸತಿ ನಿಲಯದ ವಾರ್ಡನ್ ರಶ್ಮಿ ಹಾಗೂ ಮಠದ ಎ.ಜೆ. ಪರಮಶಿವಯ್ಯರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಪೋಕ್ಸೋ ಕಾಯ್ದೆ 2012ರ ಮಾನದಂಡಗಳು ಮತ್ತು ಸುಪ್ರೀಂ ಕೋರ್ಟ್ ರೂಪಿಸಿದ ಚೌಕಟ್ಟಿನಂತೆ ಸಾಕ್ಷ್ಯಗಳ ಮೌಲ್ಯಮಾಪನ ಹಾಗೂ ವಿಚಾರಣಾ ಪ್ರಕ್ರಿಯೆ ನಡೆಯಲಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಸ್ವಾಮೀಜಿಯ ಖಾಸಗಿ ಕೋಣೆಗೆ ಹಿಂದಿನ ಬಾಗಿಲು ಇರುವುದು ಪ್ರಮುಖ ಅಂಶವಾಗಿದ್ದರೂ, ಅದನ್ನು ಪರಿಶೀಲನೆಗೊಳಪಡಿಸುವ ತಮ್ಮ ಮನವಿಯನ್ನು ಸೆಷನ್ಸ್ ಕೋರ್ಟ್ ಪರಿಗಣಿಸದೆ ಬಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ಸಂತ್ರಸ್ತೆಯರಿದ್ದ ಹಾಸ್ಟೆಲ್‌ ನಲ್ಲಿ 13 ವಿದ್ಯಾರ್ಥಿನಿಯರು ಇದ್ದರೂ, ಕೇವಲ ನಾಲ್ವರನ್ನು ಮಾತ್ರ ಸಾಕ್ಷಿಗಳಾಗಿ ವಿಚಾರಣೆಗೊಳಪಡಿಸಿರುವುದು ಪ್ರಕರಣದ ತನಿಖೆ ಮತ್ತು ವಿಚಾರಣೆಯ ಸಂಪೂರ್ಣತೆಯ ಮೇಲೆ ಪ್ರಶ್ನೆ ಎಬ್ಬಿಸುತ್ತದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಸಿಟಿವಿ ದೃಶ್ಯಾವಳಿ ಸಲ್ಲಿಸದಿರುವುದನ್ನು ನ್ಯಾಯಾಲಯ ಆರೋಪಗಳನ್ನು ಅನುಮಾನಾಸ್ಪದವೆಂದು ಪರಿಗಣಿಸಿದ ಬಗ್ಗೆ ಸಂತ್ರಸ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಸಿಸಿಟಿವಿ ವ್ಯವಸ್ಥೆಯೇ ಇಲ್ಲದ ಸಂದರ್ಭದಲ್ಲಿ ಅದರ ದೃಶ್ಯಾವಳಿ ಸಲ್ಲಿಸುವುದು ಹೇಗೆ ಸಾಧ್ಯ?” ಎಂಬ ಪ್ರಶ್ನೆಯನ್ನು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಾವು ಸುಳ್ಳು ಆರೋಪ ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂಬ ವಾದವನ್ನೂ ನ್ಯಾಯಾಲಯ ಪರಿಗಣಿಸದೆ ಬಿಟ್ಟು ತೀರ್ಪು ನೀಡಿರುವುದು ನ್ಯಾಯಸಮ್ಮತವಲ್ಲ ಎಂದು ಅವರು ದೂರಿದ್ದಾರೆ.

“ಕೇವಲ ಪ್ರತಿಕೂಲ ಸಾಕ್ಷಿಗಳನ್ನೇ ಪರಿಗಣಿಸಿ ಪ್ರಕರಣ ನಡೆದಿಲ್ಲ ಎಂದು ತೀರ್ಮಾನಿಸಿರುವುದು ಕಾನೂನಿನ ಮೂಲಭೂತ ಸಿದ್ಧಾಂತಗಳಿಗೂ ವಿರೋಧ” ಎಂದು ಹೇಳಿರುವ ಸಂತ್ರಸ್ತರು, ಮೂರು ಆರೋಪಿಗಳ ಖುಲಾಸೆಯನ್ನು ರದ್ದುಗೊಳಿಸಿ, ಅವರನ್ನು ಕಾನೂನು ಪ್ರಕಾರ ದೋಷಿಗಳೆಂದು ಪರಿಗಣಿಸಿ ಶಿಕ್ಷೆ ವಿಧಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

2022ರ ಆಗಸ್ಟ್ 26ರಂದು ಇಬ್ಬರು ಬಾಲಕಿಯರು ಮೈಸೂರಿನ ನಝರ್‌ಬಾದ್ ಪೊಲೀಸ್ ಠಾಣೆಯಲ್ಲಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲು ಮಾಡಿದ್ದರು. ನಂತರ ಸೆಪ್ಟೆಂಬರ್ 1ರಂದು ಆರೋಪಿಗಳನ್ನು ಬಂಧಿಸಲಾಯಿತು.

2025ರ ನವೆಂಬರ್ 26ರಂದು ಸೆಷನ್ಸ್ ಕೋರ್ಟ್ ಮುರುಘಾ ಶರಣರು, ರಶ್ಮಿ ಹಾಗೂ ಪರಮಶಿವಯ್ಯ ಅವರನ್ನು ಖುಲಾಸೆಗೊಳಿಸಿತ್ತು. ಈ ಆದೇಶವನ್ನು ಸಂತ್ರಸ್ತರು ಈಗ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಇದೇ ವೇಳೆ, ಶರಣರ ವಿರುದ್ಧ ಇನ್ನೂ ಇಬ್ಬರು ಬಾಲಕಿಯರು ನೀಡಿರುವ ಲೈಂಗಿಕ ಕಿರುಕುಳದ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.