ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ‍್ಯಾಗಿಂಗ್ ಪ್ರಕರಣ: 13 ವರ್ಷದ ಬಾಲಕನಿಗೆ ಗಂಭೀರ ಗಾಯ

ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ‍್ಯಾಗಿಂಗ್ ಪ್ರಕರಣ: 13 ವರ್ಷದ ಬಾಲಕನಿಗೆ ಗಂಭೀರ ಗಾಯ

ಮೈಸೂರು, ನ. 9: ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ರ‍್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತ ವಿದ್ಯಾರ್ಥಿಯೊಬ್ಬನ ಮೇಲೆ ಮೂವರು ಸಹಪಾಠಿಗಳು ಹಲ್ಲೆ ನಡೆಸಿದ ಪರಿಣಾಮ, ಬಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಅಕ್ಟೋಬರ್‌ 25ರಂದು ನಡೆದಿದೆ.ಘಟನೆಯು ಈಗ ತಡವಾಗಿ ಬಹಿರಂಗವಾಗಿದೆ.

ಮಾಹಿತಿಯ ಪ್ರಕಾರ, 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕನನ್ನು ಮೂವರು ವಿದ್ಯಾರ್ಥಿಗಳು ದಿನವೂ ಹಣ ಮತ್ತು ಮೊಬೈಲ್‌ ತರಬೇಕೆಂದು ಕಾಡುತ್ತಿದ್ದರು. “ನಾವು ಹೇಳಿದಂತೆ ಮಾಡಬೇಕು” ಎಂದು ಬೆದರಿಕೆ ಹಾಕಿ ಅವನಿಗೆ ಮಾನಸಿಕ ಒತ್ತಡ ಉಂಟುಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅಕ್ಟೋಬರ್‌ 25ರಂದು ಮೂವರು ಆರೋಪಿತರು ಬಾಲಕನನ್ನು ಶಾಲೆಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದು, ಬಾಲಕನ ಗುಪ್ತಾಂಗಕ್ಕೆ ಗಂಭೀರ ಗಾಯವಾಗಿದೆ. ಪ್ರಸ್ತುತ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯ ಬಗ್ಗೆ ಪೋಷಕರು ಮತ್ತು ಶಾಲಾ ಆಡಳಿತಕ್ಕೆ ತಡವಾಗಿ ಮಾಹಿತಿ ದೊರೆತಿದ್ದು, ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದಾಗ್ಯೂ, ಘಟನೆ ಕುರಿತು ಶಿಕ್ಷಣ ಇಲಾಖೆ ವರದಿ ಕೇಳಿದ್ದು, ಪ್ರಾಥಮಿಕ ತನಿಖೆ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಪೋಷಕರು ಶಾಲಾ ಆಡಳಿತದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದು, “ಮಕ್ಕಳ ಸುರಕ್ಷತೆಯ ವಿಷಯದಲ್ಲಿ ಶಾಲೆಗಳು ಗಂಭೀರವಾಗಿರಬೇಕು. ಇಂತಹ ಘಟನೆಗಳಿಗೆ ಶೂನ್ಯ ಸಹಿಷ್ಣುತೆ ಅಗತ್ಯ” ಎಂದು ಆಗ್ರಹಿಸಿದ್ದಾರೆ.

ಶಾಲಾ ವಲಯದಲ್ಲಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಗಳ ಭದ್ರತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ.