ಜೈಲಿನಲ್ಲಿ ಗಲಾಟೆ: ತಂಬಾಕು ನೀಡಿಲ್ಲವೆಂದು ಮೂವರು ಸಿಬ್ಬಂದಿ ಮೇಲೆ ಕೈದಿಗಳ ದಾಳಿ
ಕಾರವಾರ, ಡಿ. 06: ತಂಬಾಕು ಹಾಗೂ ಮಾದಕ ವಸ್ತುಗಳನ್ನು ಒದಗಿಸದ ಕಾರಣಕ್ಕೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಕೊಪೋದ್ರಿಕ್ತರಾಗಿ ಮೂವರು ಜೈಲು ಸಿಬ್ಬಂದಿ ಮೇಲೆ ದಾಳಿ ನಡೆಸಿದ ಘಟನೆ ಶನಿವಾರ ನಡೆದಿದೆ. ಅಚಾನಕ್ ಗಲಾಟೆಯಿಂದ ಜೈಲಿನ ಒಳಗಿನ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ದಾಳಿ ನಡೆಸಿದವರನ್ನು ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್, ಹಾಗೂ ಕೌಶಿಕ್ ನಿಹಾಲ್ ಎಂದು ಗುರುತಿಸಲಾಗಿದೆ. ಸಿಬ್ಬಂದಿ ಮತ್ತು ಜೈಲರ್ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಕೈದಿಗಳು ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು 20 ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಪರಿಶೀಲಿಸಿ ನಿಯಂತ್ರಣಕ್ಕೆ ತಂದರು. ಜೈಲಿನೊಳಗಿನ ಭದ್ರತೆ ಬಲಪಡಿಸುವ ಕುರಿತು ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಹಿಂದೆಯೂ ಐಪಿಎಸ್ ಅಧಿಕಾರಿಯ ಮೇಲೆ ದಾಳಿ ನಡೆಸಿದ್ದ ಆರೋಪಿ,ಘಟನೆಯಲ್ಲಿ ಪ್ರಮುಖ ಆರೋಪಿ ಫಯಾನ್ ಹಿಂದೆ ಮಂಗಳೂರು ಜೈಲಿನಲ್ಲೂ ಇದೇ ರೀತಿಯಲ್ಲಿ ಗಲಾಟೆ ನಡೆಸಿದ್ದಾನೆ. ಜೈಲಿನಲ್ಲಿದ್ದಾಗ ಮೊಬೈಲ್ ಮತ್ತು ತಂಬಾಕು ವಶಪಡಿಸಿಕೊಂಡಿದ್ದಕ್ಕೆ ಕೋಪಗೊಂಡ ಫಯಾನ್ ಆಗಿನ ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರ ಮೇಲೆಯೇ ದಾಳಿ ನಡೆಸಿದ್ದ ಎಂದು ತಿಳಿದು ಬಂದಿದೆ.
