ಡ್ರಾಪ್ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ

ಡ್ರಾಪ್ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ
Photo credit: TV09(ಫೋಟೋ: ಬಂಧಿತ ಆರೋಪಿ)

ಚಿಕ್ಕಬಳ್ಳಾಪುರ, ಜ.14: ಡ್ರಾಪ್ ನೀಡುವ ನೆಪದಲ್ಲಿ ಅಪ್ರಾಪ್ತ ಪಿಯುಸಿ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗೇಪಲ್ಲಿಯ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ತರಗತಿ ಮುಗಿಸಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಸ್ವಗ್ರಾಮಕ್ಕೆ ತೆರಳಲು ಪೆರೇಸಂದ್ರ ಕ್ರಾಸ್ ಸಮೀಪದ ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿ ಗಣೇಶ್, ಮನೆಗೆ ಡ್ರಾಪ್ ನೀಡುವುದಾಗಿ ಹೇಳಿ ವಿದ್ಯಾರ್ಥಿನಿಯನ್ನು ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಆರೋಪಿಯ ಮೇಲಿದೆ. ಘಟನೆ ಬಳಿಕ ಆತಂಕಗೊಂಡ ಆರೋಪಿ ತನ್ನ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ ಎನ್ನಲಾಗಿದ್ದು, ಆತನಿಂದಲೇ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಮಾಹಿತಿ ಆಧರಿಸಿ ಪೊಲೀಸರು ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿ ನಿರ್ಜನ ಪ್ರದೇಶದಲ್ಲಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪತ್ತೆಹಚ್ಚಿದ್ದಾರೆ. ವಿದ್ಯಾರ್ಥಿನಿಯನ್ನು ರಕ್ಷಿಸಿ ಸ್ಥಳೀಯ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ದಾಖಲಿಸಲಾಗಿದೆ.

ಆರೋಪಿಗೆ ಮದುವೆಯಾಗಿದ್ದು, ಮಕ್ಕಳಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸಂತ್ರಸ್ತ ಬಾಲಕಿ ತಂದೆಯನ್ನು ಕಳೆದುಕೊಂಡಿದ್ದು, ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.