ತಾಯಿಯ ಮೇಲೆ ಹಲ್ಲೆ ‌ನಡೆಸಿದ್ದ ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಮಗ

ತಾಯಿಯ ಮೇಲೆ ಹಲ್ಲೆ ‌ನಡೆಸಿದ್ದ ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಮಗ
Photo credit: TV09

ತುಮಕೂರು, ಜ.14: ತಾಯಿಗೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಲತಂದೆಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರನಗೆರೆಯಲ್ಲಿ ನಡೆದಿದೆ. ನಿತಿನ್ ತುಳಸಿರಾಮ್ (40) ಮೃತ ವ್ಯಕ್ತಿ. ಈ ಸಂಬಂಧ ಆರೋಪಿಯಾಗಿರುವ ಹರೀಶ್ ಎಂಬ ಯುವಕನನ್ನು ತುರುವೇಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಹತ್ತು ವರ್ಷಗಳ ಹಿಂದೆ ಯಶೋಧಾ ಅವರ ಮೊದಲ ಪತಿ ಮೃತಪಟ್ಟಿದ್ದರು. ಮಕ್ಕಳು ಚಿಕ್ಕವರಾಗಿದ್ದ ಕಾರಣ ಹಾಗೂ ಕುಟುಂಬದ ಜವಾಬ್ದಾರಿ ನಿಭಾಯಿಸುವ ಸಲುವಾಗಿ ಅವರು ಮೂರು ವರ್ಷಗಳ ಹಿಂದೆ ನಿತಿನ್ ತುಳಸಿರಾಮ್ ಅವರನ್ನು ಎರಡನೇ ಮದುವೆಯಾಗಿದ್ದರು. ಆದರೆ ಈ ಮದುವೆಯನ್ನು ಮಕ್ಕಳು ಒಪ್ಪಿಕೊಂಡಿರಲಿಲ್ಲ. ಹರೀಶ್‌ಗೆ ಮಲತಂದೆಯ ವಿರುದ್ಧ ಅಸಮಾಧಾನವಿದ್ದು, ಅವರಿಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ.

ಸೋಮವಾರ ತಡರಾತ್ರಿ ಯಶೋಧಾ ಮತ್ತು ನಿತಿನ್ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ನಿತಿನ್ ಯಶೋಧಾ ಮೇಲೆ ಕೈ ಮಾಡಿದ್ದಾನೆ ಎಂದು ಹೇಳಲಾಗಿದೆ. ಇದನ್ನು ಕಂಡ ಹರೀಶ್ ಮನೆಯಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ನಿತಿನ್ ಮೇಲೆ ದಾಳಿ ನಡೆಸಿದ್ದಾನೆ. ತೀವ್ರ ಗಾಯಗಳಿಂದ ನಿತಿನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.