ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ಕುರಿತು ಸಚಿವರಿಗೆ ಮನವಿ ಸಲ್ಲಿಸಿದ ರಾಜ್ಯ ರೈತ ಸಂಘ

ಹುಣಸೂರು:ಹುಣಸೂರಿಗೆ ಗಜಪಯಣದ ಅಂಗವಾಗಿ ಆಗಮಿಸಿದಂತಹ ಅರಣ್ಯ ಸಚಿವರಾದ ಈಶ್ವರ ಬಿ.ಖಂಡ್ರೆ ರವರಿಗೆ ಕಾಡು ಪ್ರಾಣಿಗಳ ಹಾವಳಿ ಹಾಗೂ ರೈತರ ಭೂ ವಿವಾದ, ಇನ್ನಿತರೆ ಸಮಸ್ಯೆಗಳ ವಿಚಾರವಾಗಿ ದಿನಾಂಕ :25-07-2025 ಶುಕ್ರವಾರ ಹುಣಸೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಮೂಲಕ ಹುಣಸೂರು ವನ್ಯಜೀವಿ ನಿರ್ದೇಶಕರ ಮೂಲಕ ಮನವಿ ಸಲ್ಲಿಸಲಾಗಿತ್ತು.
ಈ ಸಮಸ್ಯೆಗಳನ್ನು ಸೋಮವಾರ ಹುಣಸೂರಿನ ಸಂವಿಧಾನ ಸರ್ಕಲ್‌ನಲ್ಲಿ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೊಸೂರು ಕುಮಾರ್ ರವರು ಮಾತನಾಡಿ ನಿರಂತರವಾಗಿ ಕಾಡಂಚಿನ ಭಾಗದಲ್ಲಿ ಕಾಡಾನೆಗಳ ಹಾವಳಿ, ಚಿರತೆ ಮತ್ತು ಹುಲಿ ಮತ್ತು ಮಂಗಗಳು ಹೆಚ್ಚಾಗಿದ್ದು, ರೈತರ ಫಸಲನ್ನು ನಷ್ಟ ಮಾಡುವುದಲ್ಲದೆ ಪ್ರಾಣ ಹಾನಿ ಹಾಗೂ ಜಾನುವಾರುಗಳು ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗಿದ್ದು, ಈ ಭಾಗದ ಜನರ ಜೀವನವು ಕಷ್ಟಕರವಾಗಿರುತ್ತದೆ. ಆದ್ದರಿಂದ ಅರಣ್ಯ ಸಚಿವರು ಈ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಕಾಡಂಚಿನ ಜನರನ್ನು ರಕ್ಷಣೆ ಮಾಡಬೇಕೆಂದು ಮನವಿ ಮಾಡಿದರು.
ಈ ವಿಚಾರಕ್ಕೆ ಸ್ಪಂದಿಸಿದ ಅರಣ್ಯ ಸಚಿವರು ಮಾತನಾಡಿ ತಾವು ಸಲ್ಲಿಸಿರುವ ಮನವಿಯಂತೆ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು, ತಕ್ಷಣದಲ್ಲೇ ಆನೆಯನ್ನು ತಡೆಗಟ್ಟಲು ರೈಲ್ವೆ ಕಂಬಿಗಳ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಜೊತೆಯಲ್ಲಿಯೇ ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಅತೀ ಹೆಚ್ಚು ಗಮನ ಹರಿಸುವ ಮೂಲಕ ನಿಯಂತ್ರಣ ಮಾಡುವ ವೈಜ್ಞಾನಿಕವಾದ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ತಕ್ಷಣದಲ್ಲೇ ಈ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು ಹಾಗೂ ಅರಣ್ಯ ಸಮಿತಿಗಳನ್ನು ಮುಂದಿನ ದಿನಗಳಲ್ಲಿ ಇಲಾಖೆಯ ಸಹಕಾರದೊಂದಿಗೆ ಸಕ್ರೀಯವಾಗಿ ಅರಣ್ಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು ಮತ್ತು ತಮ್ಮ ಮನವಿ ಪತ್ರದಲ್ಲಿ ತಿಳಿಸಿರುವಂತಹ 11 ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಮತ್ತು ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಬಗೆಹರಿಸಲು ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರರು ಹಾಗೂ ದಸಂಸದ ಮುಖಂಡರಾದಂತಹ ನಿಂಗರಾಜ್ ಮಲ್ಲಾಡಿ ಮಾತನಾಡಿ ಗಿರಿಜನರಿಗೆ ಪೌಷ್ಠಿಕ ಆಹಾರವನ್ನು ವಿತರಣೆ ಮಾಡದೆ ತೊಂದರೆಗೀಡಾಗಿರುತ್ತಾರೆ. ತಾವುಗಳು ಗಮನಹರಿಸಿ ಗಿರಿಜನರಿಗೆ ಪೌಷ್ಠಿಕ ಆಹಾರ ಮತ್ತು ಉತ್ತಮ ಶಿಕ್ಷಣದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಆಲಿಜಾನ್, ಕಟ್ಟೆಮಳಲವಾಡಿ ಮಹದೇವು, ಬಸವರಾಜು, ಕಲ್ಲಹಳ್ಳಿ ವಿಷಕಂಠಪ್ಪ, ತಟ್ಟೆಕೆರೆ ರಾಮಕೃಷ್ಣೇಗೌಡ, ಹರಳಹಳ್ಳಿ ಬಸವರಾಜೇಗೌಡ, ಕುರುಬರ ಹೊಸಹಳ್ಳಿ ವೆಂಕಟೇಶ್, ಕಾಳೇನಹಳ್ಳಿ ಮುತ್ತು, ದಸಂಸ ಮುಖಂಡರಾದ ಚಿಕ್ಕಹುಣಸೂರು ರಾಜು, ಸಿದ್ದೇಶ್, ಗಜೇಂದ್ರ ಕಿರಿಜಾಜಿ, ದೇವೇಂದ್ರ ಕುಳುವಾಡಿ, ಧರ್ಮಾಪುರ ಗ್ರಾಮ ಘಕಟದ ಅಧ್ಯಕ್ಷ ವೆಂಕಟಾಚಲಪತಿ, ಅರಣ್ಯ ಸಮಿತಿಯ ಅಧ್ಯಕ್ಷರಾದ ಗೋವಿಂದ, ಸದಸ್ಯರುಗಳಾದ ರಾಮೇಗೌಡ, ವೆಂಕಟೇಶ್, ಶೇಖರ್, ಜಾಲಿ, ಮಹಿಳೆಯರು ಮುಂತಾದವರು ಭಾಗವಹಿಸಿ ಮನವಿ ಪತ್ರ ಸಲ್ಲಿಸಲಾಯಿತು.