ರಾಜ್ಯ ಸರ್ಕಾರದಿಂದ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್‌ "ಗ್ಯಾರಂಟಿ" ಭಾಗ್ಯ: ವ್ಯಾಪಾರಿಗಳ ಹೊಟ್ಟೆ ಉರಿಸುವ ಯೋಜನೆ: ಸಂಸದ ಯದುವೀರ್‌ ಒಡೆಯರ್‌

ರಾಜ್ಯ ಸರ್ಕಾರದಿಂದ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್‌ "ಗ್ಯಾರಂಟಿ" ಭಾಗ್ಯ:  ವ್ಯಾಪಾರಿಗಳ ಹೊಟ್ಟೆ ಉರಿಸುವ ಯೋಜನೆ: ಸಂಸದ ಯದುವೀರ್‌ ಒಡೆಯರ್‌

ಮೈಸೂರು: ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ದಿವಾಳಿಯತ್ತ ಸಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಈಗ ಸಣ್ಣ ವ್ಯಾಪಾರಿಗಳ ಮೇಲೆ ತೆರಿಗೆ ಬ್ರಹ್ಮಾಸ್ತ್ರ ಬಿಟ್ಟಿದೆ. ಜಿಎಸ್‌ಟಿ ನೋಟಿಸ್‌ ನೀಡುವ ಮೂಲಕ ವ್ಯಾಪಾರಿಗಳ ಹೊಟ್ಟೆ ಮೇಲೆ ಪೆಟ್ಟು ನೀಡುವ ಯೋಜನೆಯಾಗಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಎಂದು ದೂರಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಂಸದರು, ವಾಣಿಜ್ಯ ಇಲಾಖೆಯ ಈ ನಡೆ ಖಂಡನೀಯ, ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ವ್ಯಾಪಾರಿಗಳಿಗೆ ನೀಡಿದ ಜಿಎಸ್ಟಿ ತೆರಿಗೆ ನೋಟಿಸ್ ನೀಡುವ ನಿರ್ಧಾರ ಕೇಂದ್ರ ಸರ್ಕಾರದ್ದಲ್ಲ. ಇದು ರಾಜ್ಯ ಸರ್ಕಾರದ ತೀರ್ಮಾನ. ಬೇಕರಿ, ಕಾಂಡಿಮೆಂಟ್ ಸೇರಿದಂತೆ ಸಣ್ಣ ವ್ಯಾಪಾರಿಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ ಮೂಲಕ ಏಕಾಏಕಿಯಾಗಿ ಲಕ್ಷಾಂತರ ರೂ. ತೆರಿಗೆ ಸಂಗ್ರಹಿಸುವ ಇರಾದೆ ರಾಜ್ಯ ಸರ್ಕಾರದ್ದಾಗಿದೆ. ಈ ರೀತಿಯ ನೋಟಿಸು ಜಾರಿ ಮಾಡಿ ವ್ಯಾಪಾರಿಗಳನ್ನ ಆತಂಕಕ್ಕೆ ದೂಡಿರುವ ವಾಣಿಜ್ಯ ತೆರಿಗೆ ಇಲಾಖೆಯ ನಡೆ ಖಂಡನಾರ್ಹ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಹಗಲು ದರೋಡೆ:

 ಅವೈಜ್ಞಾನಿಕ ಗ್ಯಾರೆಂಟಿಗಳಿಂದ ಬೊಕ್ಕಸ ಬರಿದಾಗಿದೆ. ಅದನ್ನು ತುಂಬಿಸಿಕೊಳ್ಳಲು ಸಣ್ಣ ವ್ಯಾಪಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ರಾಜ್ಯ ಸರ್ಕಾರದ ಹಗಲು ದರೋಡೆ ಎಂದು ಸಂಸದರು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಇದೀಗ ಅಂಗಡಿ ಮುಗ್ಗಟ್ಟುಗಳಲ್ಲಿ ಯು.ಪಿ.ಐ ಬಳಕೆಗೆ ವರ್ತಕರು ಅವಕಾಶ ನೀಡುತ್ತಿಲ್ಲˌ ನಗದು ರಹಿತ ವ್ಯವಹಾರದ ಅನುಕೂಲತೆಯನ್ನು ಸಾರ್ವಜನಿಕರಿಂದ ಕಸಿದುಕೊಂಡಂತಾಗುತ್ತಿದೆ. ಈ ಕುರಿತು ಜನರಿಗೆ ಅಥವಾ ವ್ಯಾಪಾರಸ್ಥರಿಗೆ ಮಾಹಿತಿ ನೀಡುವುದನ್ನು ಬಿಟ್ಟುˌ ಏಕಾಏಕಿಯಾಗಿ ನೋಟಿಸ್ ನೀಡಿರುವುದು ಆತಂಕಕಾರಿ ನಡೆಯಾಗಿದೆ ಎಂದು ಯದುವೀರ್ ಹೇಳಿದ್ದಾರೆ.

ಕೇಂದ್ರದ ಮೇಲೆ ಗೂಗೆ ಕೂರಿಸಲು ಪ್ರಯತ್ನ:

ವ್ಯಾಪಾರಸ್ಥರಿಗೆ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ಕ್ರಮವಾಗಿದೆ. ಇದು ಕೇಂದ್ರ ಸರ್ಕಾರದ ಕ್ರಮ ಎಂದು ಗೂಬೆ ಕೂರಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ಅನ್ಯಾಯ ಆಗಲು ಬಿಜೆಪಿ ಬಿಡುವುದಿಲ್ಲ. ಅವರೊಂದಿಗೆ ನಾವು ಸದಾ ಇರುತ್ತೇವೆ. ವ್ಯಾಪಾರಸ್ಥರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು. ಈಗ ಉಂಟಾಗಿರುವ ಗೊಂದಲಗಳನ್ನು ಸರ್ಕಾರ ನಿವಾರಿಸಬೇಕು ಎಂದು ಸಂಸದ ಯದುವೀರ್ ಒಡೆಯರ್‌ ಆಗ್ರಹಿಸಿದ್ದಾರೆ.