ಯಾವ ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಹೇಳಿ: ಶೋಭಾ ಕರಂದ್ಲಾಜೆ

ಯಾವ ಸಾಧನಾ ಸಮಾವೇಶ ಮಾಡುತ್ತಿದ್ದೀರಿ ಹೇಳಿ: ಶೋಭಾ ಕರಂದ್ಲಾಜೆ

ಮೈಸೂರು: ಯಾವ ಸಾಧನೆ ಸಮಾವೇಶ ಮಾಡ್ತಿದೀವಿ ಎಂದು ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯನವರು ಹೇಳಬೇಕು. ನಿಮ್ಮ ಎಲ್ಲಾ ಗ್ಯಾರಂಟಿಗಳು ಫೇಲ್ಯೂರ್ ಆಗಿವೆ. ಯಾವ ಕಡೆಯಿಂದ ತೆರಿಗೆ ಸಂಗ್ರಹ ಆಗುತ್ತಿದೆ. ಆ ಹಣವನ್ನು ಏನು ಮಾಡುತ್ತಿದ್ದೀರಿ ಎಂಬುದು ಗೊತ್ತಾಗ್ತಿಲ್ಲ. ಕೇಂದ್ರದ ಅನುದಾನ ಏನ್ಮಾಡ್ತಿದೀರಾ ಗೊತ್ತಿಲ್ಲ. ಕೇಂದ್ರ ಕೊಡುವ ಅನುದಾನದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಯಾವ ಸಚಿವರು ಮತ್ತು ಶಾಸಕರು ಕ್ಷೇತ್ರ ಪ್ರವಾಸ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಕೊನೆ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿ ನಾಡದೇವತೆ ಚಾಮುಂಡಿ ತಾಯಿಯ ದರ್ಶನ ಪಡೆದರು. ಶೋಭಾ ಕರಂದ್ಲಾಜೆಗೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಚಾಮುಂಡಿಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿ ತಾಯಿಯ ದರ್ಶನ ಪಡೆದಿದ್ದೇವೆ. ಈ ದೇಶಕ್ಕೆ ಒಳ್ಳೆಯದಾಗಬೇಕು. ದೇಶಕ್ಕೆ ಶಕ್ತಿಯನ್ನು ಕೊಟ್ಟ ನರೇಂದ್ರ ಮೋದಿಯವರಿಗೆ ಆಯಸ್ಸು ಆರೋಗ್ಯ ಕರುಣಿಸಲಿ.ಮಳೆ ಚೆನ್ನಾಗಿ ಆಗುತ್ತಿದೆ, ಒಳ್ಳೆಯ ಬೆಳೆ ರೈತರಿಗೆ ಸಿಗಲಿ. ನಮ್ಮ ದೇಶಕ್ಕೆ ರಕ್ಷಣೆ ಸಿಗಲಿ ಎನ್ನುವುದು ನಮ್ಮ ಪ್ರಾರ್ಥನೆ. ಮೈಸೂರಿಗೆ ಬಂದಾಗ ಇದು ನನ್ನೂರು ಎನಿಸುತ್ತದೆ ಎಂದರು.

 ದಲಿತರೊಬ್ಬರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ವಿಚಾರವಾಗಿ, ವಿಚಾರವನ್ನು ಡೈವರ್ಟ್ ಮಾಡಲು ಏನು ಬೇಕಾದರೂ ಮಾತನಾಡುತ್ತಾರೆ. ಈ ಸರ್ಕಾರದ ಬಹಳ ಮಂದಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಅದಕ್ಕೆ ದಿನಕ್ಕೊಂದು ರೀತಿಯಲ್ಲಿ ಮಾತನಾಡ್ತಿದ್ದಾರೆ. ಏನು ಮಾತನಾಡ್ತಿದ್ದೇವೆಂದು ಅವರಿಗೆ ಗೊತ್ತಿಲ್ಲ. ನೀವು ಈ ರೀತಿ ಮಾತನಾಡೋದು ಬಿಟ್ಟು, ಟ್ಚೀಟ್ ಮಾಡೋದು ಬಿಟ್ಟು, ಹೇಳಿಕೆಗಳನ್ನು ನೀಡೋದು ಬಿಟ್ಟು ರಾಜ್ಯದ ಅಭಿವೃದ್ಧಿ ಮಾಡಿ ಎಂದು ಜನರು ನಿಮ್ಮನ್ನು ಗೆಲ್ಸಿರೋದು ಎಂದರು. ಯಾವ ಸಾಧನೆಯ ಸಮಾವೇಶವನ್ನು ಮಾಡ್ತಿದ್ದಾರೆ. ಒಂದು ಕಡೆ ಜನರು ಸಾಯ್ತಿದಾರೆ. ಜನರಿಗೆ ರಕ್ಷಣೆಯಿಲ್ಲ. ಕೊಲೆಗಳಾಗುತ್ತಿವೆ, ಚಿಕ್ಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇಶದ್ರೋಹಿ ಚಟುವಟಿಕೆಗಳು ಕರ್ನಾಟಕದಲ್ಲಿ ತಲೆ ಎತ್ತುತ್ತಿವೆ. ಪೊಲೀಸ್ ಸ್ಟೇಷನ್ ಮೇಲೆ ದಾಳಿಯಾಗುತ್ತಿವೆ. ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಅನ್ನಭಾಗ್ಯದ ಅಕ್ಕಿ ಸಾಗಾಟ ಮಾಡುವ ಲಾರಿಗಳಿಗೆ ಬಾಡಿಗೆ ಕೊಡಲು ಇವರ ಬಳಿ ದುಡ್ಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಗ್ಯಾರಂಟಿ ಯೋಜನೆಯಡಿ ಫ್ರೀ ಬಸ್ ಯೋಜನೆ ಘೋಷಣೆ ಮಾಡಿದರು. ಆದರೆ ಬಸ್ ಗಳನ್ನೇ ನಿಲ್ಲಿಸಿದ್ದಾರೆ. ಎಲ್ಲಾ ಸಾರಿಗೆ ಸಂಸ್ಥೆಗಳು ಲಾಸ್ ನಲ್ಲಿವೆ. ಅವನತಿ ಅಂಚಿನಲ್ಲಿವೆ. ಬಸ್ ಗಳನ್ನು ರಿಪೇರಿ ಮಾಡಲು ಹಣವಿಲ್ಲ. ಸರ್ಕಾರಿ ನೌಕರರಿಗೆ ವೇತನ ಕೊಡಲು ದುಡ್ಡಿಲ್ಲ. ಅಭಿವೃದ್ಧಿಗೆ ಹಣವಿಲ್ಲದ ಕಾರಣ ಕ್ಷೇತ್ರಕ್ಕೆ ಹೋಗಲು ಭಯಪಡುತ್ತಿದ್ದಾರೆ. ನಿಮ್ಮ ಶಾಸಕರೇ ನಿಮ್ಮ ವಿರುದ್ಧ ಮಾತನಾಡುವ ಪರಿಸ್ಥಿತಿ ಕೇವಲ ಎರಡು ವರ್ಷದಲ್ಲಿ ಉಂಟಾಗಿದೆ. ಇದು ನಿಮ್ಮ ಸಾಧನೆ!. ಪರಸ್ಪರ ಕುರ್ಚಿಗಾಗಿ ಕಿತ್ತಾಟ, ಯಾರು ಮುಖ್ಯಮಂತ್ರಿ ಆಗಬೇಕೆಂದು ಮೇಲಾಟ. ಯಾರು ಮಂತ್ರಿಯಾಗಬೇಕೆಂದು ಕಿತ್ತಾಟ. ಸುರ್ಜೇವಾಲ ಬಂದು ಆಡಳಿತ ನಡೆಸುವಂತಹ ದುಸ್ಥಿತಿಗೆ ತಂದಿರುವವರು ನೀವು ಸಿದ್ದರಾಮಯ್ಯನವರೇ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್ ಇನ್ನಿತರರು ಜತೆಗಿದ್ದರು.