ಭವ್ಯವಾಗಿ ನೆರವೇರಿದ ಯಲಹಂಕ, ಗೌಡ ಸಮಾಜದ 2025–26 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ
ಮಡಿಕೇರಿ ಜ.12:-ಗೌಡ ಸಮಾಜ, ಯಲಹಂಕದ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟವು, ಗೌಡ ಸಮಾಜ, ಯಲಹಂಕದ ಅಧ್ಯಕ್ಷರಾದ ಕುಂಞಳಿಯನ ಅಜೀತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ, ಸಮಾಜದ ನೂರಾರು ಸದಸ್ಯರು, ಮಹಿಳೆಯರು, ಯುವಕರು ಹಾಗೂ ಗಣ್ಯ ಅತಿಥಿಗಳು ಸಮ್ಮುಖದಲ್ಲಿ ಭವ್ಯವಾಗಿ ನಡೆಯಿತು.
ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಎಂಪ್ಲಾಯಿಸ್ ಇನ್ಸ್‍ಟಿಟ್ಯೂಟ್ ನಲ್ಲಿ ನಡೆದ ಕಾರ್ಯಕ್ರಮದ, ಆರಂಭದಲ್ಲಿ ಪ್ರಾರ್ಥನೆಯೊಂದಿಗೆ ಸಮಾರಂಭಕ್ಕೆ ಶುಭಾರಂಭವಾಗಿದ್ದು, ಬಳಿಕ ಸಂಘದ ಪರಂಪರೆಯಂತೆ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ 2024–25ನೇ ಸಾಲಿನ ಆಡಳಿತ ಮಂಡಳಿಯ ಕಾರ್ಯ ವರದಿ ಹಾಗೂ ಲೆಕ್ಕಪತ್ರಗಳನ್ನು ಸಭೆಯ ಮುಂದಿಡಲಾಗಿದ್ದು, ಸದಸ್ಯರಿಂದ ಸಮಗ್ರ ಚರ್ಚೆ ಮತ್ತು ಅನುಮೋದನೆ ದೊರೆಯಿತು. ಸಂಘದ ವಿವಿಧ ಕಲ್ಯಾಣ ಕಾರ್ಯಗಳು, ಅಭಿವೃದ್ಧಿ ಚಟುವಟಿಕೆಗಳು ಹಾಗೂ ಯುವಕರಿಗೆ ನೀಡಿದ ಅವಕಾಶಗಳ ಕುರಿತು ವಿವರವಾದ ಮಾಹಿತಿ ಮಂಡಿಸಲಾಯಿತು.
ಸಮಾಜದ ಆತ್ಮವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ, ಶಾಲೆ-ಕಾಲೇಜುಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮಾಜದಲ್ಲಿ ಹೊಸದಾಗಿ ವಿವಾಹವಾದ ದಂಪತಿಗಳಿಗೆ ನವ ದಂಪತಿಗಳ ಪರಿಚಯ ಕಾರ್ಯಕ್ರಮದ ಮೂಲಕ ಸ್ವಾಗತಿಸಲಾಯಿತು.
ಜೊತೆಗೆ, ಸಮಾಜಕ್ಕೆ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಹಿರಿಯ ಸದಸ್ಯರಿಗೆ ಗೌರವ ಸನ್ಮಾನ ಕೈಗೊಳ್ಳಲಾಯಿತು. ಹೊಸದಾಗಿ ಸೇರಿರುವ ಸದಸ್ಯರನ್ನೂ ವೇದಿಕೆಯಲ್ಲಿ ಪರಿಚಯಿಸುವ ಮೂಲಕ ಸಂಘದ ವಿಸ್ತಾರ ಮತ್ತು ಒಗ್ಗಟ್ಟುಗೆ ಹೊಸ ಪರಿಣಾಮ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿ ಕೊಡಗು ಗೌಡ ಸಮಾಜಗಳ ಒಕ್ಕೂಟ (ರಿ.), ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಒಗ್ಗಟ್ಟು, ಶಿಕ್ಷಣ, ಉದ್ಯೋಗಾವಕಾಶಗಳು ಹಾಗೂ ಯುವಕರ ಪಾತ್ರ ಕುರಿತು ಮಾರ್ಗದರ್ಶನ ನೀಡಿದರು.
ಇವರೊಂದಿಗೆ ನಂಗಾರು ನಿಂಗರಾಜು, ಕೋಟೇರ ವೇಣುಗೋಪಾಲ್, ಅಚ್ಚಲ್ಪಾಡಿ ಲಕ್ಷಕುಮಾರ್, ಕಲ್ಲುಮುಟ್ಟು ನಿತ್ಯಾನಂದ, ಕನ್ನಡ್ಕ ವಿಜಯಲಕ್ಷ್ಮಿ ಜಯರಾಮ್, ಕಲ್ಲುಮುಟ್ಲು ಪವನ್, ಅಯ್ಯಣರ ಶಾಲಿನಿ ನಿತ್ಯ, ಕೋಳುಮುಡಿಯನ ಮಿಲನ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯನ್ನು ಅಲಂಕರಿಸಿ ಕಾರ್ಯಕ್ರಮಕ್ಕೆ ಗೌರವ ತಂದರು.
ಸಮಾಜದ ಯುವಕ-ಯುವತಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದ್ದು, ನೃತ್ಯ, ಜನಪದ ಹೀಗೆ ವಿವಿಧ ಕಲಾಪ್ರದರ್ಶನಗಳು ಪ್ರೇಕ್ಷಕರ ಮನಸ್ಸು ಗೆದ್ದವು. ಮಹಿಳಾ ಘಟಕದ ವಿಶೇಷ ಕಾರ್ಯಕ್ರಮಗಳು ಸಮಾರಂಭಕ್ಕೆ ಹೆಚ್ಚಿನ ಚೈತನ್ಯ ತುಂಬಿದವು.