BMTC ಬಸ್ ನಿಂದ 13 ನಿಮಿಷಗಳಲ್ಲಿ 124 ಲೀಟರ್ ಡಿಸೇಲ್ ದೋಚಿದ ಕಳ್ಳರು!
ಬೆಂಗಳೂರು, ಡಿ. 08: ನಗರದ ರಾಂಪುರ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಬಿಎಂಟಿಸಿ ಬಸ್‌ನಿಂದ ಕಳ್ಳರು ಕೇವಲ 13 ನಿಮಿಷಗಳಲ್ಲಿ 124 ಲೀಟರ್ ಡೀಸೆಲ್ ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಾಲಕ–ನಿರ್ವಾಹಕ, ಬೆಳಗ್ಗೆ ಬಸ್ ರಸ್ತೆಯಲ್ಲಿ ನಿಂತುಹೋದಾಗ ಮಾತ್ರ ವಿಷಯ ಬಹಿರಂಗವಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡೂರು 47ನೇ ಡಿಪೋದ ಬಸ್‌ವು ಡಿಸೆಂಬರ್ 1ರ ರಾತ್ರಿ, ದಿನದ ಸೇವೆ ಮುಗಿಸಿ ಸುಮಾರು 11 ಗಂಟೆಗೆ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಶಿವಪ್ಪ ಎಂ.ಎಸ್ (36) ಹಾಗೂ ನಿರ್ವಾಹಕ ಮಂಜುನಾಥ್ ಬಿ.ಸಿ ಬಸ್‌ನಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.
ಬೆಳಗಿನ ಜಾವ 2:30ರ ಸುಮಾರಿಗೆ ಟಾಟಾ ಇಂಡಿಕಾ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಬಂಕ್ ಪ್ರದೇಶದ ಚಲನವಲನ ಗಮನಿಸಿ, ಬಸ್ ಬಳಿ ಬಂದು ಒಳಗೆ ಇಣುಕಿ ನೋಡಿದಾಗ ಸಿಬ್ಬಂದಿ ನಿದ್ರೆಯಲ್ಲಿರುವುದು ದೃಢಪಟ್ಟಿತ್ತು. ಬಳಿಕ ಕ್ಷಣಾರ್ಧದಲ್ಲಿ ಟ್ಯಾಂಕ್ ಬೀಗ ಒಡೆದು ಪೈಪ್ ಮೂಲಕ ಡೀಸೆಲ್ ಹೊರತೆಗೆದಿದ್ದಾರೆ.
13 ನಿಮಿಷಗಳಲ್ಲಿ ಇಂಧನ ದೋಚಿದ ಖದೀಮರು
ಮಾತ್ರ 13 ನಿಮಿಷಗಳ ಅವಧಿಯಲ್ಲಿ ಸುಮಾರು 124 ಲೀಟರ್ ಡೀಸೆಲ್ ಪ್ಲಾಸ್ಟಿಕ್ ಕ್ಯಾನ್‌ಗಳಿಗೆ ತುಂಬಿಸಿ ಪರಾರಿಯಾಗಿದ್ದಾರೆ. ಕಳವುಗೊಂಡ ಇಂಧನದ ಮೌಲ್ಯ ಸುಮಾರು ₹11,000 ಎಂದು ಅಂದಾಜಿಸಲಾಗಿದೆ. ರಾತ್ರಿ 11ರಿಂದ ಬೆಳಗ್ಗೆ 6ರವರೆಗೂ ಪೆಟ್ರೋಲ್ ಬಂಕ್ ಮುಚ್ಚಿರುತ್ತದೆ. ಈ ಅವಧಿಯನ್ನೇ ಕಳ್ಳರು ಬಳಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ನಿಂತಾಗ ಕಳ್ಳತನ ಬಹಿರಂಗ
ಬೆಳಗ್ಗೆ 4:30ರ ಹೊತ್ತಿಗೆ ಕಾರ್ಯಕ್ಕೆ ತೊಡಗಿದ ಚಾಲಕ–ನಿರ್ವಾಹಕರು ಹಲಸೂರು ಪ್ರದೇಶ ತಲುಪುವಷ್ಟರಲ್ಲಿ ಬಸ್ ಏಕಾಏಕಿ ನಿಂತುಹೋಯಿತು. ಡಿಪೋ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಹಿಂದಿನ ದಿನ ಬಸ್‌ಗೆ 124 ಲೀಟರ್‌ಗಿಂತ ಹೆಚ್ಚು ಡೀಸೆಲ್ ತುಂಬಿಸಲಾಗಿದೆ ಎಂಬ ಮಾಹಿತಿ ದೊರಕಿತು. ಅನುಮಾನಗೊಂಡ ಇಬ್ಬರೂ ರಾಂಪುರಕ್ಕೆ ಹಿಂತಿರುಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳವು ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗಿರುವುದು ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 3ರಂದು ಪೊಲೀಸರು ದೂರು ದಾಖಲಿಸಿದ್ದು, ಆವಲಹಳ್ಳಿ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 303ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
