ಪಾಕಿಸ್ತಾನಕ್ಕೆ ನೌಕಾಪಡೆಯ ರಹಸ್ಯ ಮಾಹಿತಿ ಸೋರಿಕೆ; ಕೊಚ್ಚಿನ್ ಶಿಪ್ ಯಾರ್ಡ್ ನ ಇಬ್ಬರು ನೌಕರರ ಬಂಧನ
ಉಡುಪಿ, ನ.21: ಭಾರತದ ನೌಕಾಪಡೆಯ ಹಡಗುಗಳಿಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ವಾಟ್ಸಪ್ ಹಾಗೂ ಫೇಸ್‌ಬುಕ್ ಮೂಲಕ ವಿದೇಶಗಳಿಗೆ ರವಾನಿಸುತ್ತಿದ್ದ ಕೊಚ್ಚಿನ್ ಶಿಪ್ ಯಾರ್ಡ್/ನ ಇಬ್ಬರು ನೌಕರರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಸುಲ್ತಾನಪುರ ಮೂಲದ ರೋಹಿತ್ (29) ಮತ್ತು ಸಂತ್ರಿ (37) ಬಂಧಿತರಾಗಿದ್ದು, ಇಬ್ಬರ ಮೇಲೂ ಅಧಿಕೃತ ರಹಸ್ಯ ಕಾಯ್ದೆಯಡಿ ಗಂಭೀರ ಆರೋಪಗಳು ದಾಖಲಾಗಿವೆ. ನ್ಯಾಯಾಲಯ ಡಿ.3ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆರೋಪಿಗಳನ್ನು ನಾಳೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಗುರುವಾರ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಇನ್ಸುಲೇಟರ್ ಆಗಿ ಕೆಲಸ ಮಾಡುತ್ತಿದ್ದ ರೋಹಿತ್, ಕೊಚ್ಚಿನ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತ ಸಂತ್ರಿಯಿಂದ ನೌಕಾಪಡೆಯ ಹಡಗುಗಳ ಸಂಖ್ಯೆ ಮತ್ತು ಅದರಂತೆಯೇ ಇನ್ನಿತರ ಸಂವೇದನಶೀಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ.
ಈ ಮಾಹಿತಿಗಳನ್ನು ವಾಟ್ಸಪ್ ಹಾಗೂ ಫೇಸ್‌ಬುಕ್ ಮೂಲಕ ಪಾಕಿಸ್ತಾನ ಸೇರಿದಂತೆ ವಿದೇಶಗಳಿಗೆ ಕಳುಹಿಸುತ್ತಿದ್ದು, ಬದಲಿಗೆ ಹಣ ಪಡೆಯುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಬಂದರು, ಹಡಗು ಮತ್ತು ಜಲಸಾರಿಗೆ ಇಲಾಖೆಯ ನಿಯಂತ್ರಣದಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಮತ್ತು ಮಲ್ಪೆಯ ಘಟಕದಲ್ಲಿ ಇಬ್ಬರೂ ಕೆಲಸ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ಮಾಹಿತಿಗಳು ಸೋರಿಕೆಯಾಗುತ್ತಿತ್ತು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ರೋಹಿತ್, ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಸಬ್‌ಕಾಂಟ್ರಾಕ್ಟ್ ಹೊಂದಿದ ‘ಸುಷ್ಮಾ ಮೆರೈನ್ ಪ್ರೈ.ಲಿ.’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು.
ಆರು ತಿಂಗಳ ಹಿಂದೆ ಮಲ್ಪೆಗೆ ವರ್ಗಾವಣೆಯಾಗಿ ಬಂದಿದ್ದರೂ, ರೋಹಿತ್ ಕೊಚ್ಚಿನ್‌ನಲ್ಲಿರುವ ಸಂತ್ರಿಯಿಂದ ರಹಸ್ಯ ದಾಖಲೆಗಳನ್ನು ಪಡೆದು ಅನಧಿಕೃತ ವ್ಯಕ್ತಿಗಳಿಗೆ ಕಳುಹಿಸುತ್ತಿದ್ದ.
ಈದು ದೇಶದ ಸಾರ್ವಭೌಮತೆ, ಏಕತೆ ಹಾಗೂ ಆಂತರಿಕ ಭದ್ರತೆಗೆ ಗಂಭೀರ ಅಪಾಯವನ್ನು ಉಂಟುಮಾಡುವ ಕೃತ್ಯವಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಒತ್ತಿ ಹೇಳಿದರು.
ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನ ಸಿಇಒ ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 128/2025ರಂತೆ ಬಿಎನ್‌ಎಸ್ ಕಲಂ 152 ಹಾಗೂ ಅಧಿಕೃತ ರಹಸ್ಯ ಕಾಯ್ದೆ 1923ರ ಕಲಂ 3 ಮತ್ತು 5 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
