ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಶಸ್ತ್ರಚಿಕಿತ್ಸೆ: ನಕಲಿ ವೈದ್ಯನ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು

ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಶಸ್ತ್ರಚಿಕಿತ್ಸೆ: ನಕಲಿ ವೈದ್ಯನ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು
ಸಾಂದರ್ಭಿಕ ಚಿತ್ರ

ಭಾಗಲ್ಪುರ, ಜ. 9: ಯೂಟ್ಯೂಬ್‌ನಲ್ಲಿ ಲಭ್ಯವಿದ್ದ ವಿಡಿಯೋ ವೀಕ್ಷಿಸಿ ಹೆರಿಗೆಗೆ ಶಸ್ತ್ರಚಿಕಿತ್ಸೆ ನಡೆಸಿದ ನಕಲಿ ವೈದ್ಯನ ನಿರ್ಲಕ್ಷ್ಯದಿಂದ ಗರ್ಭಿಣಿಯೊಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಭಾಗಲ್ಪುರ ಜಿಲ್ಲೆಯಲ್ಲಿ ನಡೆದಿದೆ. ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಮೃತಪಟ್ಟರೂ, ನವಜಾತ ಶಿಶುವನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. 

ಭಾಗಲ್ಪುರ ಜಿಲ್ಲೆಯ ಕಹಲ್ಗಾಂವ್ ಬ್ಲಾಕ್‌ನ ಎಚ್ಚಾರಿ ಪಂಚಾಯತ್ ವ್ಯಾಪ್ತಿಯ ಶ್ರೀಮತ್ ಸ್ಥಾನ ಸಮೀಪ ಈ ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ಸ್ವಾತಿ ದೇವಿ ಎಂದು ಗುರುತಿಸಲಾಗಿದೆ. ಗರ್ಭಿಣಿಯಾಗಿದ್ದ ಸ್ವಾತಿ ದೇವಿ, ರಸಲ್‌ಪುರದಲ್ಲಿರುವ ತಮ್ಮ ತವರಿನಲ್ಲಿ ವಾಸಿಸುತ್ತಿದ್ದು, ಸ್ಥಳೀಯ ನಕಲಿ ವೈದ್ಯನ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಸಮೀಪದ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ದಿದ್ದಾರೆ. ಪರಿಶೀಲನೆಯ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದು, ಕುಟುಂಬದ ಒಪ್ಪಿಗೆ ಪಡೆದು ಯೂಟ್ಯೂಬ್‌ ನಲ್ಲಿ ಲಭ್ಯವಿದ್ದ ವಿಡಿಯೋ ವೀಕ್ಷಿಸಿ ಯಾವುದೇ ಅಗತ್ಯ ವೈದ್ಯಕೀಯ ಸೌಲಭ್ಯಗಳಿಲ್ಲದೆ ಆಪರೇಷನ್ ಆರಂಭಿಸಿದ್ದಾರೆ ಎನ್ನಲಾಗಿದೆ.

ಶಸ್ತ್ರಚಿಕಿತ್ಸೆ ವೇಳೆ ಸ್ವಾತಿ ದೇವಿಗೆ ತೀವ್ರ ರಕ್ತಸ್ರಾವ ಉಂಟಾಗಿ, ಆಪರೇಷನ್ ನಡೆಯುತ್ತಿದ್ದ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ನಂತರ ಮಗುವನ್ನು ಹೊಟ್ಟೆಯಿಂದ ಹೊರತೆಗೆಯಲಾಗಿದೆ. ಆದರೆ ಮಹಿಳೆ ಮೃತಪಟ್ಟ ವಿಷಯವನ್ನು ಮುಚ್ಚಿಟ್ಟ ವೈದ್ಯರು, ಆಕೆಯ ಸ್ಥಿತಿ ಗಂಭೀರವಾಗಿದ್ದು ಬೇರೆ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಬಳಿಕ ಕ್ಲಿನಿಕ್ ಮುಚ್ಚಿ ವೈದ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕ್ಲಿನಿಕ್ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ಸಂಬಂಧ ನಕಲಿ ವೈದ್ಯನನ್ನು ವಶಕ್ಕೆ ಪಡೆದುಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.