ಸಂಸದರ ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ ನೀಡಿದ ಯದುವೀರ್‌ ಒಡೆಯರ್

ಸಂಸದರ ಬ್ಯಾಡ್ಮಿಂಟನ್‌ ಟೂರ್ನಿಗೆ ಚಾಲನೆ ನೀಡಿದ ಯದುವೀರ್‌ ಒಡೆಯರ್

ಮೈಸೂರು, ನ. 15: ಇಡೀ ದೇಶವನ್ನು ಆರೋಗ್ಯವಾಗಿ ಹಗೂ ಎಲ್ಲರೂ ಚಟುವಟಿಕೆಯಿಂದ ಇರಬೇಕು ಎಂಬ ನಿಟ್ಟಿನಲ್ಲಿ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಫಿಟ್‌ ಇಂಡಿಯಾ ಯೋಜನೆ ಜಾರಿಗೆ ತಂದಿದ್ದು, ಈ ನಿಟ್ಟಿನಲ್ಲಿಎಲ್ಲರೂ ಆರೋಗ್ಯಕರ ಜೀವನ ಶೈಲಿ ಅನುಸರಿಸಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಮೈಸೂರಿನ ಬೋಗಾದಿ ಬೋಗಾದಿ 2ನೇ ಹಂತದ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ "ಸಂಸದರ ಬ್ಯಾಡ್ಮಿಂಟನ್‌ ಪಂದ್ಯಾವಳಿ"ಗೆ ಚಾಲನೆ ನೀಡಿ ಸಂಸದ ಯದುವೀರ್‌ ಮಾತನಾಡಿದರು.

 ಫಿಟ್‌ ಇಂಡಿಯಾವು ಕೇಂದ್ರ ಸರ್ಕಾರದ ಪ್ರಮುಖ ಅಭಿಯಾನವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ 2019ರ ಆಗಸ್ಟ್‌ 29ರಂದು ರಾಷ್ಟ್ರೀಯ ಕ್ರೀಡಾ ದಿನದಂದು ಈ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಅಭಿಯಾನದ ಭಾಗವಾಗಿ ಸಂಸದರ ಬ್ಯಾಡ್ಮಿಂಟನ್‌ ಟೂರ್ನಿ ಆಯೋಜಿಸಲಾಗಿದೆ ಎಂದರು.

ನಿತ್ಯ ದೈಹಿಕ ವ್ಯಾಯಾಮ ಮಾಡಿ ಸಾರ್ವಜನಿಕರು ನಿತ್ಯ ದೈಹಿಕ ವ್ಯಾಯಾಮ ಮಾಡಬೇಕು. ಕನಿಷ್ಠ 30-60 ನಿಮಿಷ ವ್ಯಾಯಾಮ ಮಾಡಿದರೆ ಮಧುಮೇಹ, ಹೃದ್ರೋಗ ನಿಯಂತ್ರಿಸಬಹುದು. ಅದಕ್ಕಾಗಿ ಯುವಜನತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಫಿಟ್‌ನೆಸ್‌ಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸಂಸದರು ಕರೆ ನೀಡಿದರು.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಫಿಟ್‌ನೆಸ್‌ ಕ್ಲಬ್‌ಗಳು, ಯೋಗ ಶಿಬಿರಗಳು, ಸೈಕ್ಲಿಂಗ್‌, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದರು.

ಎಪಿಎನ್‌ ಪ್ರಾಪರ್ಟಿಸ್‌ ವ್ಯವಸ್ಥಾಪಕ ಪಾಲುದಾರ ಎ.ಪಿ. ನಾಗೇಶ್‌ ಮಾತನಾಡಿ, ಫಿಟ್‌ ಇಂಡಿಯಾ ಅಭಿಯಾನದಡಿ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಸಲಹೆಯಂತೆ ಫ್ರೀಡಮ್‌ ರನ್‌, ಫಿಟ್‌ ಇಂಡಿಯಾ ಸೈಕ್ಲೋಥಾನ್‌, ಫಿಟ್‌ ಇಂಡಿಯಾ ಸ್ಕೂಲ್‌ ಸರ್ಟಿಫಿಕೇಶನ್‌, ಫಿಟ್‌ ಇಂಡಿಯಾ ಓಟ ಅಥವಾ ನಡಿಗೆಯ ಸಮಯದಲ್ಲಿ ಕಸ ಸಂಗ್ರಹಿಸುವ ಚಟುವಟಿಕೆ, ಯೋಗ, ಆಯುಷ್‌ ಸಂಯೋಜನೆ ಕಾರ್ಯಕ್ರಮ, ಫಿಟ್‌ ಇಂಡಿಯಾ ಡೈಲಾಗ್‌ ಎಂಬ ಪ್ರಸಿದ್ದ ಕ್ರೀಡಾ ವ್ಯಕ್ತಿಗಳೊಂದಿಗೆ ಚರ್ಚೆ ನಡೆಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಿದಂತಾಗುತ್ತಿದೆ ಎಂದರು.

 ಉದ್ಯಮಿ ರಾಜೀವ್‌ ಕುಮಾರ್‌, ಪ್ರಸಿದ್ದಿ ರವಿ, ಎಂ. ನಾಗರಾಜ್‌, ಜೈನ್‌ ಅಶೋಕ್‌, ಪಿ. ರೋಹಿತ್‌ ಹಾಗೂ ಇತರರು ಹಾಜರಿದ್ದರು. ಮೈಸೂರು ಹಾಗೂ ಸುತ್ತಮುತ್ತಲಿನ ನಗರಗಳ ಸುಮಾರು 400ಕ್ಕೂ ಹೆಚ್ಚು ಮಂದಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು.