ಫೀ.ಮಾ.ಕಾರ್ಯಪ್ಪ ಕಾಲೇಜು ಹಾಗೂ ಹಳೇ ವಿದ್ಯಾರ್ಥಿಗಳಿಂದ ಲೇಖಕಿ ದೀಪಾಭಾಸ್ತಿ ಅವರಿಗೆ ಸನ್ಮಾನ

ಫೀ.ಮಾ.ಕಾರ್ಯಪ್ಪ ಕಾಲೇಜು ಹಾಗೂ ಹಳೇ ವಿದ್ಯಾರ್ಥಿಗಳಿಂದ ಲೇಖಕಿ ದೀಪಾಭಾಸ್ತಿ ಅವರಿಗೆ ಸನ್ಮಾನ

ಮಡಿಕೇರಿ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಮಡಿಕೇರಿಯ ಲೇಖಕಿ ದೀಪಾಭಾಸ್ತಿ ಅವರನ್ನು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಕಾಲೇಜ್ ನ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಗರದಲ್ಲಿರುವ ದೀಪಾಭಾಸ್ತಿ ಅವರ ಮನೆಗೆ ಭೇಟಿ ನೀಡಿದ ಕಾಲೇಜ್ ನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಂಘದ ಪದಾಧಿಕಾರಿಗಳು ದೀಪಾಭಾಸ್ತಿ ಹಾಗೂ ಅವರ ಪತಿ ಚೆಟ್ಟೀರ ನಾಣಯ್ಯ ಅವರನ್ನು ಸನ್ಮಾನಿಸಿ, ಗೌರವಿಸಿದರು.

ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಅವರು ಮಾತನಾಡಿ, ಕಾರ್ಯಪ್ಪ ಕಾಲೇಜ್ ನ ಹಳೇ ವಿದ್ಯಾರ್ಥಿನಿಯಾಗಿರುವ ದೀಪಾಭಾಸ್ತಿ ಅವರ ಸಾಧನೆಯನ್ನು ಜಗತ್ತೇ ಮೆಚ್ಚಿಕೊಂಡಿದೆ, ಇದೊಂದು ಹೆಮ್ಮೆಯ ಕ್ಷಣ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರಿನಲ್ಲಿ ರಾರಾಜಿಸುತ್ತಿರುವ ಕಾಲೇಜ್ ನ ಹಿರಿಮೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದು, ಕಾಲೇಜ್ ಗೆ ಮತ್ತೊಂದು ಗರಿ ಬಂದತಾಗಿದೆ. ಮುಂದಿನ ದಿನಗಳಲ್ಲೂ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ದೀಪಾ ಭಾಸ್ತಿಯವರ ಸಾಧನೆಗೆ ಸಹಕಾರ ನೀಡಿದ ಪತಿ ಚೆಟ್ಟೀರ ನಾಣಯ್ಯ ಹಾಗೂ ಪೋಷಕರನ್ನು ಇದೇ ಸಂದರ್ಭ ಅಭಿನಂದಿಸಿದರು. 

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಬಾನುಮುಷ್ತಾಕ್ ಅವರ ಎದೆಯ ಹಣತೆ ಕನ್ನಡ ಕೃತಿಯನ್ನು ಹಾರ್ಟ್ ಲ್ಯಾಂಪ್ ಎಂಬ ಆಂಗ್ಲ ಭಾಷಾ ಕೃತಿಗೆ ಅನುವಾದಿಸಿರುವುದು ಸುಲಭದ ಕಾರ್ಯವಲ್ಲ ಕನ್ನಡ ಭಾಷಾ ಕೃತಿಯನ್ನು ಭಾಷಾ ಶ್ರೀಮಂತಿಕೆಗೆ ಚ್ಯುತಿ ಬಾರದಂತೆ ಆಂಗ್ಲಭಾಷೆಗೆ ಅನುವಾದಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಶ್ಲಾಘನೀಯ ಎಂದರು. 

ಇದು ಕರ್ನಾಟಕ, ಕೊಡಗು ಮಾತ್ರವಲ್ಲದೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಕೂಡ ಹೆಮ್ಮೆ ಪಡುವಂತಹ ಸಾಧನೆಯಾಗಿದೆ ಎಂದು ತಿಳಿಸಿದರು. ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ದೀಪಾಭಾಸ್ತಿ ಮಾತನಾಡಿ, ಸುಮಾರು 3 ವರ್ಷಗಳ ನಿರಂತರ ಶ್ರಮದಿಂದ ಈ ಪ್ರಶಸ್ತಿ ಲಭ್ಯವಾಗಿದ್ದು, ಪತಿಯ ಸಹಕಾರ ಹಾಗೂ ಪೋಷಕರ ಪ್ರೋತ್ಸಾಹದಿಂದ ಯಶಸ್ಸು ಪಡೆಯಲು ಸಾಧ್ಯವಾಯಿತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಉಪನ್ಯಾಸಕರಾದ ಪ್ರೊ.ಕೆ.ಪಿ.ನಾಗರಾಜು, ಪ್ರೊ.ಆರ್.ರಾಜೇಂದ್ರ, ಪ್ರೊ.ಗಾಯತ್ರಿದೇವಿ, ಡಾ.ಶೈಲಶ್ರೀ, ಡಾ.ಪ್ರದೀಪ್ ಬಂಡಾರಿ, ಬಿ.ಹೆಚ್.ತಳವಾರ, ಹೆಚ್.ಆರ್.ರಮೇಶ್, ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕರಾದ ಎಸ್.ಆರ್.ವತ್ಸಲ, ಲೋಹಿತ್ ಮಾಗುಲುಮನೆ ಮತ್ತಿತರರು ಹಾಜರಿದ್ದರು.