ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 9,639 ಮಕ್ಕಳ ಅಪಹರಣ: ಶೇ.71.5 ಬಾಲಕಿಯರು
ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಸುರಕ್ಷತೆ ಗಂಭೀರ ಚಿಂತೆಗೆ ಕಾರಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಒಟ್ಟು 9,639 ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ ಎಂಬುದು ಗೃಹ ಇಲಾಖೆಯ ಅಂಕಿ–ಅಂಶಗಳಿಂದ ತಿಳಿದುಬಂದಿದೆ. ಅಪಹರಣಕ್ಕೊಳಗಾದ ಮಕ್ಕಳಲ್ಲಿ ಶೇ.71.5ರಷ್ಟು ಬಾಲಕಿಯರು ಇರುವುದೇ ಆತಂಕಕಾರಿ ಅಂಶವಾಗಿದೆ.
ಗೃಹ ಇಲಾಖೆ ಮಾಹಿತಿ ಪ್ರಕಾರ, 2023ರಲ್ಲಿ 3,039, 2024ರಲ್ಲಿ 3,411 ಹಾಗೂ 2025ರ ನವೆಂಬರ್ 15ರವರೆಗೆ 3,189 ಮಕ್ಕಳ ಅಪಹರಣ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಅಪಹರಣಕ್ಕೊಳಗಾದ ಮಕ್ಕಳಲ್ಲಿ 6,891 ಬಾಲಕಿಯರು ಮತ್ತು 2,748 ಗಂಡು ಮಕ್ಕಳು ಸೇರಿದ್ದಾರೆ.
2023ರಲ್ಲಿ ಅಪಹರಣಕ್ಕೊಳಗಾದ ಮಕ್ಕಳ ಪೈಕಿ 2,131 ಬಾಲಕಿಯರು ಮತ್ತು 903 ಗಂಡು ಮಕ್ಕಳು ಇದ್ದರು. 2024ರಲ್ಲಿ ಒಟ್ಟು 3,411 ಪ್ರಕರಣಗಳಲ್ಲಿ 2,436 ಬಾಲಕಿಯರು ಮತ್ತು 975 ಗಂಡು ಮಕ್ಕಳು ಅಪಹರಣಕ್ಕೊಳಗಾದರು. 2025ರ ನವೆಂಬರ್ 15ರವರೆಗೆ ದಾಖಲಾಗಿರುವ 3,189 ಪ್ರಕರಣಗಳಲ್ಲಿ 2,324 ಬಾಲಕಿಯರು ಮತ್ತು 865 ಗಂಡು ಮಕ್ಕಳು ಸೇರಿದ್ದಾರೆ.
ಪತ್ತೆ ಕಾರ್ಯದಲ್ಲಿ ಆತಂಕ
ಅಪಹರಣಗೊಂಡ ಮಕ್ಕಳ ಪತ್ತೆ ವಿಚಾರದಲ್ಲೂ ಗಂಭೀರ ಚಿತ್ರಣ ಕಂಡುಬರುತ್ತಿದೆ. 2023ರಲ್ಲಿ 77, 2024ರಲ್ಲಿ 145 ಮತ್ತು 2025ರಲ್ಲಿ (ನ.15ರವರೆಗೆ) 872 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಇವುಗಳಲ್ಲಿ ಹೆಚ್ಚಿನವು ಬಾಲಕಿಯರ ಪ್ರಕರಣಗಳಾಗಿವೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಬೆಂಗಳೂರು ಅಗ್ರಸ್ಥಾನ
ಮಕ್ಕಳ ಅಪಹರಣ ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ 3,268 ಮಕ್ಕಳ ಅಪಹರಣ ವರದಿಯಾಗಿದ್ದು, ಇದರಲ್ಲಿ 2,290 ಬಾಲಕಿಯರು ಸೇರಿದ್ದಾರೆ. ರಾಜ್ಯದಲ್ಲಿ ವರದಿಯಾದ ಒಟ್ಟು ಮಕ್ಕಳ ಅಪಹರಣ ಪ್ರಕರಣಗಳ ಪೈಕಿ ಸುಮಾರು ಶೇ.24ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ಸಂಭವಿಸಿವೆ.
ಬೆಂಗಳೂರು ಜಿಲ್ಲೆ (ಗ್ರಾಮಾಂತರ ಸೇರಿ) ಯಲ್ಲಿ 694, ತುಮಕೂರು ಜಿಲ್ಲೆಯಲ್ಲಿ 450, ರಾಮನಗರದಲ್ಲಿ 305, ದಾವಣಗೆರೆಯಲ್ಲಿ 301, ಶಿವಮೊಗ್ಗದಲ್ಲಿ 297, ಮಂಡ್ಯದಲ್ಲಿ 283, ಹಾಸನದಲ್ಲಿ 264 ಹಾಗೂ ಚಿತ್ರದುರ್ಗದಲ್ಲಿ 244 ಮಕ್ಕಳ ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
