ಮಹಿಳೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಆರೋಪಿ

ಮಹಿಳೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಆರೋಪಿ
Photo credit: TV09 (ಫೋಟೋ: ದಾಕ್ಷಾಯಿಣಿ& ವೀರಭದ್ರಪ್ಪ)

ಬೆಂಗಳೂರು, ಜ. 14: ಬೆಂಗಳೂರು ಉತ್ತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 55 ವರ್ಷದ ದಾಕ್ಷಾಯಿಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವೀರಭದ್ರ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಜನವರಿ 10ರಂದು ಕುದುರೆಗೆರೆ ಕಾಲೋನಿಯಲ್ಲಿ ದಾಕ್ಷಾಯಿಣಿಯನ್ನು ನಡುರಸ್ತೆಯಲ್ಲಿ ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದ ವೀರಭದ್ರ, ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಮುನ್ನ ಆರೋಪಿ ಬರೆದಿಟ್ಟಿದ್ದ ಡೆತ್‌ ನೋಟ್‌ನಲ್ಲಿ, ದಾಕ್ಷಾಯಿಣಿಗೆ ಲಕ್ಷಾಂತರ ರೂಪಾಯಿ ಹಣ ಹಾಗೂ ಬಂಗಾರದ ಒಡವೆಗಳನ್ನು ನೀಡಿದ್ದರೂ, ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದೆ ಎಂದು ಉಲ್ಲೇಖಿಸಿದ್ದಾನೆ ಎನ್ನಲಾಗಿದೆ. ಹಣ ಹಾಗೂ ಒಡವೆಗಳನ್ನು ಹಿಂದಿರುಗಿಸುವಂತೆ ಕೇಳಿದಾಗ ದಾಕ್ಷಾಯಿಣಿ ಮತ್ತು ಆಕೆಯ ಗೆಳೆಯ ಬೆದರಿಕೆ ಹಾಕಿದರೆಂದು ಆರೋಪಿಸಿ, ಆಕ್ರೋಶದ ಹಿನ್ನೆಲೆಯಲ್ಲಿ ಹತ್ಯೆ ನಡೆಸಿರುವುದಾಗಿ ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೀರಭದ್ರ ದಾಕ್ಷಾಯಿಣಿಗೆ ಸೋದರ ಮಾವನ ಸಂಬಂಧಿಯಾಗಿದ್ದು, ಚಿಕ್ಕಬಾಣಾವರ ನಿವಾಸಿಯಾಗಿದ್ದ. ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ ಈತ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಿನ್ನೆಲೆ;

ದಾಕ್ಷಾಯಿಣಮ್ಮ ಎಂಟು ವರ್ಷಗಳ ಹಿಂದೆ ಪತಿ ನಾಗರಾಜ್ ಅವರನ್ನು ಕಳೆದುಕೊಂಡಿದ್ದು, ಇಬ್ಬರು ಪುತ್ರಿಯರ ವಿವಾಹ ನೆರವೇರಿಸಿದ್ದರು. ಮನೆ ಬಾಡಿಗೆ ಹಾಗೂ ಹಣಕಾಸು ವ್ಯವಹಾರಗಳ ಮೂಲಕ ಜೀವನ ಸಾಗಿಸುತ್ತಿದ್ದರು. ಜನವರಿ 10ರಂದು ಮೊಮ್ಮಗನನ್ನು ಶಾಲೆಯಿಂದ ಕರೆತರಲು ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ವೀರಭದ್ರ ಏಕಾಏಕಿ ದಾಳಿ ನಡೆಸಿ ಹತ್ಯೆ ಮಾಡಿ ಪರಾರಿಯಾಗಿದ್ದ.

ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಡೆತ್‌ ನೋಟ್ ಸೇರಿದಂತೆ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.