ಬೆಂಗಳೂರು:ವಾಕಿಂಗ್ ಮಾಡುತ್ತಿದ್ದ ವೇಳೆ ಆಗಿದ್ದೇನು ಗೊತ್ತಾ!

ಬೆಂಗಳೂರು:ವಾಕಿಂಗ್ ಮಾಡುತ್ತಿದ್ದ ವೇಳೆ ಆಗಿದ್ದೇನು ಗೊತ್ತಾ!
Photo credit: INDIA TODAY

ಬೆಂಗಳೂರು, ನ. 4: ನಗರ ಹೃದಯಭಾಗದ ಇಂದಿರಾ ನಗರದಲ್ಲಿ ಯುವಕನೊಬ್ಬ ಮಹಿಳೆಯ ಎದುರು ಅಸಹ್ಯ ಕೃತ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಬೆಳಗಿನ ವಾಕಿಂಗ್ ವೇಳೆ “ಮೇಡಂ” ಎಂದು ಕರೆದ ಯುವಕ, ಮಹಿಳೆ ತಿರುಗಿ ನೋಡುತ್ತಿದ್ದಂತೆಯೇ ಖಾಸಗಿ ಅಂಗ ಪ್ರದರ್ಶಿಸಿ ಹಸ್ತಮೈಥುನ ಮಾಡಿದ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ನವೆಂಬರ್ 1ರಂದು ಬೆಳಿಗ್ಗೆ ಸುಮಾರು 11.57ರ ಹೊತ್ತಿಗೆ ಈ ಘಟನೆ ನಡೆದಿದ್ದು, ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಸುಮಾರು 30 ವರ್ಷದ ವ್ಯಕ್ತಿಯೊಬ್ಬ “ಮೇಡಂ” ಎಂದು ಕರೆದಿದ್ದಾನೆ. ಮಹಿಳೆ ತಿರುಗಿ ನೋಡುತ್ತಿದ್ದಂತೆಯೇ ಆತ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ ಎಂದು ವರದಿಯಾಗಿದೆ.

ಘಟನೆಯಿಂದ ಬೆಚ್ಚಿಬಿದ್ದ ಮಹಿಳೆ ತಕ್ಷಣ ನಾಯಿಯೊಂದಿಗೆ ಮನೆಗೆ ಓಡಿ ಹೋಗಿ, ಬಳಿಕ ಸಹೋದರಿ ಹಾಗೂ ಸ್ನೇಹಿತರಿಗೆ ಮಾಹಿತಿ ನೀಡಿದ್ದು, ನಂತರ ಇಂದಿರಾ ನಗರ ಠಾಣೆಗೆ ದೂರು ನೀಡಿದ್ದಾರೆ. 

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 75 ಅಡಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿಕೊಂಡಿದ್ದಾರೆ. “ಆರೋಪಿಯ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.