ಬೆಂಗಳೂರು: ನಾಯಿಯನ್ನು ಮುದ್ದಿಸುವ ನೆಪದಲ್ಲಿ ಯುವತಿಗೆ ಕಿರುಕುಳ; ಫೋನ್ ಕದ್ದು ಪರಾರಿಯಾದ ಅಪರಿಚಿತ

ಬೆಂಗಳೂರು: ನಾಯಿಯನ್ನು ಮುದ್ದಿಸುವ ನೆಪದಲ್ಲಿ ಯುವತಿಗೆ ಕಿರುಕುಳ; ಫೋನ್ ಕದ್ದು ಪರಾರಿಯಾದ ಅಪರಿಚಿತ

ಬೆಂಗಳೂರು, ನ.16: ಜ್ಞಾನಭಾರತಿ ಬಳಿಯ ಉಪಕಾರ್ ಲೇಔಟ್ನಲ್ಲಿ ರಾತ್ರಿ ವಾಕಿಂಗ್ಗೆ ಬಂದಿದ್ದ ಯುವತಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಿರುಕುಳ ನೀಡಿ, ನಂತರ ಮೊಬೈಲ್ ಕಳ್ಳತನ ಪರಾರಿಯಾದ ಘಟನೆ ನಡೆದಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ. 7ರ ರಾತ್ರಿ ಸಾಕು ನಾಯಿಯನ್ನು ಕರೆದುಕೊಂಡು ವಾಕಿಂಗ್ಗೆ ಬಂದಿದ್ದ ಯುವತಿಯ ಬಳಿ ವ್ಯಕ್ತಿಯೊಬ್ಬ ಬಂದು, “ನಾಯಿಯನ್ನು ಮುಟ್ಟಬಹುದೇ?” ಎಂದು ಕೇಳಿದ್ದ. ಸಾಮಾನ್ಯವಾಗಿ ಶ್ವಾನಪ್ರಿಯರು ಹೀಗೆ ಕೇಳುವುದರಿಂದ ಯುವತಿಗೂ ಅನುಮಾನ ಬರಲಿಲ್ಲ. ಆತನಿಗೆ ನಾಯಿಯನ್ನು ಮುದ್ದಿಸಲು ಅವಕಾಶ ನೀಡಿದ್ದಳು.

ಆದರೆ ನಾಯಿಯನ್ನು ಮುದ್ದಿಸುತ್ತಿದ್ದ ವ್ಯಕ್ತಿ ಕ್ಷಣಾರ್ಧದಲ್ಲೇ ಯುವತಿಯನ್ನು ಸ್ಪರ್ಶಿಸಲು ಮುಂದಾಗಿದ್ದಾನೆ. ಬೆಚ್ಚಿಬಿದ್ದ ಯುವತಿ ಆತನನ್ನು ತಕ್ಷಣ ತಳ್ಳಿದರೂ, ಮತ್ತೊಮ್ಮೆ ಮುಂದಾಗಲು ಯತ್ನಿಸಿದಾಗ ಆಕೆ ಆತನಿಗೆ ತಿರುಗೇಟು ನೀಡಿದ್ದಾರೆ. ಈ ನಡುವೆ ಗಲಾಟೆಯಿಂದ ಕೆಳಗೆ ಬಿದ್ದ ಸುಮಾರು ₹25,000 ಮೌಲ್ಯದ ಮೊಬೈಲ್ ಫೋನ್ನ್ನು ಎತ್ತಿಕೊಂಡು ಆತ ಪರಾರಿಯಾಗಿದ್ದಾನೆ.

ಸಾರ್ವಜನಿಕರು ಸೇರುವಷ್ಟರಲ್ಲಿ ಆರೋಪಿಯು ಕಣ್ಮರೆಯಾಗಿದ್ದಾನೆ. ಯುವತಿಯ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮೂಲಕ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.